ಹುಬ್ಬಳ್ಳಿ:
ಹು-ಧಾ ಮಹಾನಗರ ವ್ಯಾಪ್ತಿಯಲ್ಲಿನ ಕೆರೆಗಳಿಗೆ ನಿಯಮ ಪಾಲಿಸದೇ ಚರಂಡಿ ನೀರು ಬಿಡುತ್ತಿರುವ ಬಗ್ಗೆ ಪಾಲಿಕೆ ಕಮಿಷನರ್ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿ ಅನುಸಾರ ಪ್ರಕರಣ ದಾಖಲಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಹಾನಗರ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ ಮತ್ತು ಎಷ್ಟು ಕೆರೆಗಳು ಮಲೀನವಾಗಿವೆ ಎಂದು ಕೇಳಿದ ಅವರು ಎಸ್‌ಟಿಪಿ (ತ್ಯಾಜ್ಯ ನೀರು ಶುದ್ಧೀಕರಣ ಘಟಕ) ಸ್ಥಾಪನೆ ಮತ್ತು ಕೊಳಚೆ ನೀರು ಮಾರ್ಗ ಬದಲಾವಣೆಗೆ ಪಾಲಿಕೆ ಯಾವ ಕ್ರಮ ವಹಿಸಿದೆ. ಒಂದು ವೇಳೆ ಕ್ರಮ ವಹಿಸದಿದ್ದರೆ, ಬೋರ್ಡ್‌ನಿಂದ ಯಾವ ಕ್ರಮ ವಹಿಸಿದ್ದೀರಿ ಎಂದು ಪ್ರಶ್ನಿಸಿದರು.ಪ್ಲಾಸ್ಟಿಕ್ ಬಳಕೆ ವಿರುದ್ಧ ಕ್ರಮ ಏನು?: ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಜತೆಗೆ ಜಾನುವಾರುಗಳು ಪ್ಲಾಸ್ಟಿಕ್ ತಿಂದು ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿ ಬಗ್ಗೆ ಜನರಲ್ಲಿ ಜಾಗೃತಿ ಅಭಿಯಾನ ನಿರಂತರಗೊಳಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಸಭೆಗೆ ಮಾಹಿತಿ ನೀಡಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಮಹಾನಗರ ವ್ಯಾಪ್ತಿಯಲ್ಲಿ ಒಟ್ಟು 9 ಕೆರೆಗಳು ಮಲೀನವಾಗಿವೆ. ಈ ಬಗ್ಗೆ ಎಚ್ಚರಿಕೆ ನೀಡಿ ಪಾಲಿಕೆಗೆ ನೋಟಿಸ್ ನೀಡಲಾಗಿದೆ. ಅಲ್ಲದೇ, 5 ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಕಾರರ ವಿರುದ್ಧ ಒಟ್ಟು 252 ಪ್ರಕರಣ ದಾಖಲಿಸಿದ್ದು, ₹3.86 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಸ್ಥಳೀಯ ಪಾಲಿಕೆ ಅಧಿಕಾರಿಗಳಿಂದ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ನಿರೀಕ್ಷಿತ ಮಟ್ಟದ ದಂಡ ಬಂದಿಲ್ಲ ಎಂದರು.ಪ್ಲಾಸ್ಟಿಕ್ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು. ಕನಿಷ್ಠ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಬೇಕು. ಅದರೊಟ್ಟಿಗೆ ಪಾಲಿಕೆ, ಸ್ವಸಹಾಯ ಸಂಘಗಳೊಂದಿಗೆ ಕಾರ್ಯಕ್ರಮಗಳನ್ನು ಮಾಡಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಬೇಕು. ಇನ್ನೊಂದೆಡೆ ಮಂಡಳಿಯು ಹೆಚ್ಚಾಗಿ ಪ್ಲಾಸ್ಟಿಕ್ ಉತ್ಪಾದಿಸುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕೆರೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೇ, ನಿಯಮಾನುಸಾರ ಕಮಿಷನರ್ ಮೇಲೆ ಮತ್ತೊಂದು ಕೇಸ್ ದಾಖಲಿಸಿ ಎಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಅರಣ್ಯಾಧಿಕಾರಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.