ಶಿವಮೊಗ್ಗ ದಸರಾ: ಕಣ್ಮನ ಸೆಳೆದ ಆಹಾರ ಸ್ಪರ್ಧೆ

KannadaprabhaNewsNetwork |  
Published : Sep 30, 2025, 02:00 AM IST
ಪೋಟೋ: 29ಎಸ್‌ಎಂಜಿಕೆಪಿ07ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಯುವ ದಸರಾ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್​​ ಹಿರೋ ಶಿವರಾಜ್​ ಕುಮಾರ್ ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಶಿವಮೊಗ್ಗ ದಸರಾದ ಭಾಗವಾಗಿ ಮೆಸ್ಕಾಂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಸೋಮವಾರ ಆಯೋಜಿಸಿದ್ದ ಆಹಾರ ದಸರಾದಲ್ಲಿ ಬಾಳೆ ಹಣ್ಣು ಹಾಗೂ ಇಡ್ಲಿ ತಿನ್ನುವ ಸ್ಪರ್ಧೆ ವೀಕ್ಷಕರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಶಿವಮೊಗ್ಗ ದಸರಾದ ಭಾಗವಾಗಿ ಮೆಸ್ಕಾಂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಸೋಮವಾರ ಆಯೋಜಿಸಿದ್ದ ಆಹಾರ ದಸರಾದಲ್ಲಿ ಬಾಳೆ ಹಣ್ಣು ಹಾಗೂ ಇಡ್ಲಿ ತಿನ್ನುವ ಸ್ಪರ್ಧೆ ವೀಕ್ಷಕರ ಗಮನ ಸೆಳೆಯಿತು.

ಮೆಸ್ಕಾಂ ಮಹಿಳಾ ಸಿಬ್ಬಂದಿಗೆ ಆಯೋಜಿಸಿದ್ದ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಯಲ್ಲಿ ಮೆಸ್ಕಾಂ ಲೆಕ್ಕಾಧಿಕಾರಿ ಜಾನಕಿ ಅವರು 2 ನಿಮಿಷದಲ್ಲಿ 8 ಬಾಳೆ ಹಣ್ಣು ತಿಂದು ಮೊದಲ ಸ್ಥಾನ ಗಿಟ್ಟಿಸಿಕೊಂಡರೆ, ಪಿ.ವಿಶಾಲಾಕ್ಷಿ ಅವರು 7 ಅರ್ಧ ಬಾಳೆ ಹಣ್ಣು ತಿಂದು ದ್ವೀತಿಯ ಸ್ಥಾನ ಗಳಿಸಿದರು, ಇನ್ನು 7 ಬಾಳೆ ಹಣ್ಣು ತಿಂದು ಶಿವಮ್ಮ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟರು.

ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಧನಲಕ್ಷ್ಮಿ ಅವರು 2 ನಿಮಿಷದಲ್ಲಿ 11 ವರೆ ಬಾಳೆಹಣ್ಣು ತಿಂದು ಪ್ರಥಮ ಬಹುಮಾನ ಪಡೆದರೆ, 10 ವರೆ ಬಾಳೆ ಹಣ್ಣು ತಿಂದ ಬಿ.ಜಿ. ಗೀತಾ ದ್ವೀತಿಯ, ಚಂದ್ರಮ್ಮ ಗುಡ್ರುಕೊಪ್ಪ ಅವರು 9 ವರೆ ಬಾಳೆ ಹಣ್ಣು ತಿಂದು ತೃತೀಯ ಬಹುಮಾನ ಪಡೆದರು. ಈ ಸ್ಪರ್ಧೆಗೆ 15 ಜನ ಮಹಿಳೆಯರು ಪಾಲ್ಗೊಂಡಿದ್ದರು.

ಮೆಸ್ಕಾಂ ಪುರುಷ ಸಿಬ್ಬಂದಿಗೆ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ರಾಕೇಶ್ ಗೌಡ 2 ನಿಮಿಷದಲ್ಲಿ 10 ಇಡ್ಲಿ ತಿಂದು ಪ್ರಥಮ ಬಹುಮಾನ ಪಡೆದರು. ಸಂದೀಪ 5 ತಿಡ್ಲಿ ತಿಂದು ದ್ವಿತೀಯ, ಸುಮಿತ್ ಸಾಗರ್ ಅವರು 4 ಮೂಕ್ಕಾಲು ಇಡ್ಲಿ ತಿಂದು ತೃತೀಯ ಬಹುಮಾನ ಗಿಟ್ಟಿಸಿಕೊಂಡರು.

ಸಾರ್ವಜನಿಕರಿಗೆ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮದನ್ 10 ಮುಕ್ಕಾಲು ಇಡ್ಲಿ ತಿಂದು ಪ್ರಥಮ ಬಹುಮಾನ ಪಡೆದರೆ, ಅಟೋ ಚಾಲಕ ಪ್ರವೀಣ್ 10 ಇಡ್ಲಿ ತಿಂದು ದ್ವಿತೀಯ ಬಹುಮಾನ ಹಾಗೂ 9 ಇಡ್ಲಿ ತಿಂದ ಮಣಿಕಂಠ ತೃತೀಯ ಬಹುಮಾನ ಗಿಟ್ಟಿಸಿಕೊಂಡರು. ಈ ಸ್ಪರ್ಧೆಗೆ 50 ಜನರು ಭಾಗವಹಿಸಿದ್ದರು.

ಇಡ್ಲಿ ಹಾಗೂ ಬಾಳೆ ಹಣ್ಣುತಿನ್ನುವ ಸ್ಪರ್ಧೆ ನೋಡುವುದಕ್ಕೆ ಸಾಕಷ್ಟು ಜನರು ಪಾಲ್ಗೊಂಡು ಆಹಾರ ದಸರಾ ಕಳೆಗಟ್ಟುವಂತೆ ಮಾಡಿದರು.

ಇಡ್ಲಿ ಹಾಗೂ ಬಾಳೆ ಹಣ್ಣುತಿನ್ನುವ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಆಹಾರ ದಸರಾದಲ್ಲಿ ವಿಶೇಷವಾಗಿ ಮಳೆ, ಗಾಳಿಚಳಿ ಲೆಕ್ಕಿಸದೆ ಕೆಲಸ ಮಾಡುವ ಮೆಸ್ಕಾಂ ನೌಕರರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ರುಚಿಯಾದ ಇಡ್ಲಿಸಾಂಬಾರ್ ತಿನ್ನುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶವಿದೆ. ಅಲ್ಲಮ ಪ್ರಭು ಮೈದಾನದಲ್ಲೂ ಕೂಡ ಆಹಾರ ಮೇಳ ನಡೆಯುತ್ತಿದ್ದು, ಸಾರ್ವಜನಿಕರು ಅದರಲ್ಲೂ ಭಾಗವಹಿಸಬೇಕು ಎಂದು ಕರೆ ನೀಡಿದರು.

ಮೆಸ್ಕಾಂ ಕಾರ್ಯನಿರ್ವಾಹಕ ಅಧೀಕ್ಷಕ ವಿರೇಂದ್ರ ಮಾತನಾಡಿ, ಮೆಸ್ಕಾಂ ನೌಕರರು ಸೈನಿಕರು ಇದ್ದ ಹಾಗೆ. ಯಾವಾಗಲೂ ಅವರು ತಮ್ಮ ಸ್ವಂತ ಕಾರ್ಯಗಳನ್ನು ತ್ಯಾಗ ಮಾಡಿ ಕರ್ತವ್ಯಕ್ಕೆ ಹಾಜಾರಾಗುವ ಅನಿವಾರ್ಯತೆ ಇರುತ್ತದೆ. ಅಂತಹ ನೌಕರರಿಗೆ ಸ್ವಲ್ಪ ಸಮಯದಲ್ಲಾದರೂ ಖುಷಿ ಸಿಗಲಿ ಎನ್ನುವ ಉದ್ದೇಶಕ್ಕೆ ಈಅವಕಾಶ ಕಲ್ಪಿಸಲಾಗಿದೆ ಎಂದರು.

ಡಿಎಚ್‌ಒ ಡಾ.ನಟರಾಜ್, ತೀರ್ಪುಗಾರರಾಗಿ ಡಾ. ಉಮಾ, ಡಾ. ಉಮಾ, ಆಹಾರ ದಸರಾ ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.

ಪತ್ರಕರ್ತರಿಗೆ ಪತ್ರಿಕಾ ದಸರಾ:

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆವತಿಯಿಂದ ಶಿವಮೊಗ್ಗ ದಸರಾ ಅಂಗವಾಗಿ ಭಾನುವಾರ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಸಹಯೋಗದಲ್ಲಿ ವೈವಿಧ್ಯಮಯ ಪತ್ರಿಕಾ ದಸರಾವನ್ನು ಹಮ್ಮಿಕೊಳ್ಳಲಾಯಿತು.

ಪತ್ರಕರ್ತರಿಗೆ ರಸಪ್ರಶ್ನೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆ, ಸಾರ್ವಜನಿಕರಿಗೆ ಪದಬಂಧ ಸ್ಪರ್ಧೆ, ಮನರಂಜನಾ ಸ್ಫರ್ಧೆಗಳು, ಕರೋಕೆ, ವ್ಯಂಗ್ಯಚಿತ್ರ ಪ್ರದರ್ಶ, ಛಾಯಾಚಿತ್ರ ಪ್ರದರ್ಶನ, ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಾಧಾನ ಕಾರ್ಯದರ್ಶಿಗಳ ಪರಂಪರೆ ಹಾಗೂ ಛಾಯಾಚಿತ್ರ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆದ ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ವಿವಿಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸುವರ್ಣಾ ಟಿ.ವಿ. ವರದಿಗಾರ ರಾಜೇಶ್‌ಕಾಮತ್, ಅಪಾಯಕಾರಿ ವೃತ್ತಿಗಳಲ್ಲಿ ಪ್ರತಿಕೋದ್ಯಮವೂ ಒಂದು. ಮುದ್ರಣ ಮಾಧ್ಯಮ ಪತ್ರಿಕೋದ್ಯಮದ ಬೇರು ಇದ್ದ ಹಾಗೆ. ಪತ್ರಕರ್ತರಿಗೆ 24 ಗಂಟೆ ಸಾಕಾಗುವುದಿಲ್ಲ, 2 ಕೈಗಳು ಸಾಕಾಗುವುದಿಲ್ಲ ಎಂದರು.

ಸಮಾರೋಪದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಛಾಯಾಗ್ರಾಹಕರಾದ ಮತ್ತು ಛಾಯಾಚಿತ್ರ ಪ್ರದರ್ಶಿಸಿದ ಯೋಗರಾಜ್ ಮತ್ತು ಶಿವಮೊಗ್ಗ ನಾಗರಾಜ್ ಹಾಗೂ ಛಾಯಾಚಿತ್ರ ದಸರಾವನ್ನು ಉದ್ಘಾಟಿಸಿದ ಎಸ್.ಕೆ. ದಿನೇಶ್, ಹಿರಿಯ ವ್ಯಂಗ್ಯಚಿತ್ರಕಾರರಾದ ರಾಮಧ್ಯಾನಿ ಹಾಗೂ ಇತರರನ್ನು ಸನ್ಮಾನಿಸಲಾಯಿತು.

ಸಂಘದ ರಾಜ್ಯ ಸಮಿತಿ ಸದಸ್ಯ ಎನ್‌. ರವಿಕುಮಾರ್, ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಉಪಾಧ್ಯಕ್ಷರಾದ ಹಾಲಸ್ವಾಮಿ, ವೈದ್ಯನಾಥ್, ಜಿಲ್ಲಾ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಪ್ರತಿಕಾ ದಸರಾ ಕಾರ್ಯದರ್ಶಿ ಯಶವಂತ್ , ಎಸ್. ಚಂದ್ರಕಾಂತ್, ಭಂಡಿಗಡಿ ನಂಜುಂಡಪ್ಪ ಮತ್ತಿತರರು ಇದ್ದರು.

ರಂಗು ಹೆಚ್ಚಿಸಿದ ನಟ ಶಿವಣ್ಣನ ಡ್ಯಾನ್ಸ್​, ಸಾಂಗ್ಸ್​

ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಯುವ ದಸರಾ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್​​ ಹಿರೋ ಶಿವರಾಜ್​ ಕುಮಾರ್​​ ಅವರು ಭಾಗವಹಿಸಿದ್ದು ನೆರೆದಿದ್ದವರನ್ನು ಪುಲ್ ಖುಷಿ ಆಗುವಂತೆ ಮಾಡಿತು.

ಯುವ ದಸರಾದ ನಿಮಿತ್ತ ಖ್ಯಾತ ಹಿನ್ನೆಲೆ ಗಾಯಕ ಹೇಮಂತ್​​ ಹಾಗೂ ಅನನ್ಯ ಭಟ್​​ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು.

ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದ ಬೃಹತ್ ವೇದಿಕೆಯಲ್ಲಿ ಸಂಜೆ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾಗಿ ತುಂತುರು ಮಳೆ ಇದ್ದರೂ ಸಹ ಶಿವಮೊಗ್ಗ ಕಲಾ ರಸಿಕರು ಯಾವುದಕ್ಕೂ ಜಗ್ಗದೇ ಸಂಗೀತ ರಸಸಂಜೆ ಅನುಭವಿಸಿದರು.‌

ಅದರಲ್ಲೂ ನಟ ಶಿವರಾಜ್ ಕುಮಾರ್ ವೇದಿಕೆ ಮೇಲೆ ಆಗಮಿಸುತ್ತಿದ್ದಂತಯೇ ನೆರೆದಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.‌ ಬಳಿಕ ಶಿವಣ್ಣ ಟಗರು ಹಾಡಿಗೆ ಭರ್ಜರಿ ಸ್ಟೆಪ್ಸ್​ ಹಾಕಿ ಎಲ್ಲರನ್ನು ರಂಜಿಸಿದರು. ಗಾಯಕ ಹೇಮಂತ್​ ಕುಮಾರ್​ ಅವರ ಜೊತೆ ಹಾಡು ಹಾಡಿ ಎಲ್ಲರನ್ನು ರಂಜಿಸಿದರು. ಈ ವೇಳೆ ಗೀತ ಶಿವರಾಜ್​ಕುಮಾರ್​, ಸಚಿವ ಮಧು ಬಂಗಾರಪ್ಪ, ಶಾಸಕ ಚನ್ನಬಸಪ್ಪ, ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸೇರಿದಂತೆ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ