;Resize=(412,232))
ಶಿವಮೊಗ್ಗ : ಚಿತ್ರದುರ್ಗದ ಬಸ್ ದುರಂತ ಮಾಸುವ ಮುನ್ನವೇ ಶಿವಮೊಗ್ಗದಲ್ಲಿ ಮತ್ತೊಂದು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ನಾನ್ ಎಸಿ ಖಾಸಗಿ ಸ್ಪೀಪರ್ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಸಮೀಪದ ಸೂಡುರು ಬಳಿಯ 9ನೇ ಮೈಲುಗಲ್ಲಿನ ಬಳಿ ಮಂಗಳವಾರ ತಡರಾತ್ರಿ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರಿನ ಅನ್ನಪೂರ್ಣ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ನಾನ್ ಎಸಿ ಸ್ಪೀಪರ್ ಬಸ್, ಹೊಸನಗರ ತಾಲೂಕಿನ ನಿಟ್ಟೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟಿತ್ತು.
ಮಂಗಳವಾರ ರಾತ್ರಿ ನಿಟ್ಟೂರಿನಿಂದ ಹೊರಟು ನಗರ, ಹೊಸನಗರ, ರಿಪ್ಪನ್‌ಪೇಟೆ ಮೂಲಕ ಶಿವಮೊಗ್ಗದತ್ತ ಬರುವಾಗ ಅರಸಾಳು-ಸೂಡೂರು ಬಳಿಯ 9ನೇ ಮೈಲುಗಲ್ಲಿನ ಮಾರ್ಗದಲ್ಲಿ ಕಾಡಿನ ಮಧ್ಯೆ ಬೆಂಕಿ ಕಾಣಿಸಿಕೊಂಡಿದೆ.
ಬಸ್‌ನಲ್ಲಿ 36 ಮಂದಿ ಪ್ರಯಾಣಿಕರಿದ್ದರು. ಆರಂಭದಲ್ಲಿ ಬಸ್‌ನಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿ ನಿಂತಿದೆ. ನಂತರ ಬೆಂಕಿ ಹತ್ತಿಕೊಂಡಿದ್ದು, ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ. ಘಟನೆಯಲ್ಲಿ 10 ಜನರಿಗೆ ತೀವ್ರ ಗಾಯಗಳಾಗಿದ್ದು, ಕೆಲವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ, ಇನ್ನು ಕೆಲ ಪ್ರಯಾಣಿಕರನ್ನು ರಿಪ್ಪನ್‌ಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರಿಪ್ಪನ್‌ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಚಾಲಕನ ಆಸನದ ಹಿಂಬದಿಯಲ್ಲಿ ಅಳವಡಿಸಲಾಗಿದ್ದ ಇಸಿಎಂ ಬೋರ್ಡ್ ಏಕಾಏಕಿ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಬಸ್‌ನ ಬ್ರೇಕ್ ವಾಕ್ಯೂಮ್ ವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡು ಚಾಲಕನ ನಿಯಂತ್ರಣ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಬಸ್ ಮರಕ್ಕೆ ಡಿಕ್ಕಿ ಹೊಡೆಯದೆ ಮುಂದಕ್ಕೆ ಸಾಗಿದ್ದರೆ ಸಾಕಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.