ವಾಯುವಿಹಾರಿಗಳ ನೆಚ್ಚಿನ ತಾಣವಾಗುತ್ತಿರುವ ಶಿವಪುರ ಕೆರೆ

KannadaprabhaNewsNetwork |  
Published : Aug 11, 2025, 12:31 AM IST
೧೦ಎಸ್.ಎನ್.ಡಿ.೦೩- ಸಂಡೂರಿನ ಶಿವಪುರ ಕೆರೆ ಮಳೆ ನೀರಿನಿಂದ ಮೈದುಂಬಿಕೊಂಡಿರುವುದು.೧೦ಎಸ್.ಎನ್.ಡಿ.೦೪- ಸಂಡೂರಿನ ಶಿವಪುರ ಕೆರೆಯ ಬಳಿಯಲ್ಲಿ ಹಲವರು ವಾಕಿಂಗ್ ಮಾಡುತ್ತಿರುವುದು. ೧೦ಎಸ್.ಎನ್.ಡಿ.೦5- ಸಂಡೂರಿನ ಶಿವಪುರ ಕೆರೆಯ ಬದಿಯಲ್ಲಿ ನಿರ್ಮಿಸಲಾಗಿರುವ ಪರ್ಗೋಲಾದಲ್ಲಿ  ವಾಯುವಿಹಾರಿಗಳು ವಿಶ್ರಾಂತಿ ಪಡೆಯುತ್ತಿರುವುದು. | Kannada Prabha

ಸಾರಾಂಶ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಪಟ್ಟಣದ ಹೊರವಲಯದ ಶಿವಪುರ ಕೆರೆ ಮೈದುಂಬಿಕೊಂಡಿದ್ದು, ಜೀವಕಳೆ ಬಂದಿದೆ.

ವಾಕಿಂಗ್‌ ಪಾತ್, ಸುತತ್ಲೂ ತಂತಿ ಬೇಲಿ, ವಿದ್ಯುದ್ದೀಪ ವ್ಯವಸ್ಥೆ

ಸುತ್ತಲಿನ ಕೊಳವೆಬಾವಿಗಳ ಜಲಮಟ್ಟ ಹೆಚ್ಚಳ

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಪಟ್ಟಣದ ಹೊರವಲಯದ ಶಿವಪುರ ಕೆರೆ ಮೈದುಂಬಿಕೊಂಡಿದ್ದು, ಜೀವಕಳೆ ಬಂದಿದೆ.

ಶಿವಪುರ ಕೆರೆಯು ಸಂಡೂರು ಪಟ್ಟಣಕ್ಕಿಂತ ಸ್ವಲ್ಪ ಮೇಲ್ಮಟ್ಟದಲ್ಲಿರುವ ಕಾರಣ ಈ ಕೆರೆಯು ತುಂಬಿಕೊಂಡರೆ ಅಂತರ್ಜಲ ಪ್ರಮಾಣ ಹೆಚ್ಚಿ, ಸಂಡೂರು ಪಟ್ಟಣ ಸೇರಿದಂತೆ ಸುತ್ತಲಿನ ದೌಲತ್‌ಪುರ ಹಾಗೂ ಕೃಷ್ಣಾನಗರ ಭಾಗದ ಕೊಳವೆಬಾವಿಗಳು ಹಾಗೂ ತೆರೆದ ಬಾವಿಗಳ ನೀರಿನ ಮಟ್ಟ ಹೆಚ್ಚಾಗುತ್ತದೆ. ಕೊಳವೆಬಾವಿಗಳಲ್ಲಿ ಯಥೇಚ್ಛವಾಗಿ ನೀರು ದೊರೆಯುತ್ತದೆ.

ಈ ಕೆರೆಗೆ ನೀರು ಪೂರೈಸುತ್ತಿದ್ದ ಹಳ್ಳ-ಕೊಳ್ಳಗಳ ಮಾರ್ಗಗಳು ಈ ಹಿಂದೆ ಮುಚ್ಚಿಹೋಗಿದ್ದರಿಂದ, ಕೆಲವು ವರ್ಷಗಳ ಹಿಂದೆ ಈ ಕೆರೆಯು ಬಣಗುಡುವಂತಾಗಿತ್ತು. ಕೆರೆಗೆ ನೀರನ್ನು ಪೂರೈಸುವ ಉದ್ದೇಶದಿಂದ ಸಂಸದ ಈ. ತುಕಾರಾಂ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಶಿವಪುರ ಕೆರೆಯ ಹಿಂಬದಿಯಲ್ಲಿನ ಗುಡ್ಡಬೆಟ್ಟಗಳಲ್ಲಿಂದ ಹರಿದು ಬರುವ ನೀರಿಗೆ ಚೆಕ್ ಡ್ಯಾಂ ಕಟ್ಟಿಸಲು, ಅಲ್ಲಿ ಸಂಗ್ರಹಗೊಂಡ ನೀರನ್ನು ಪೈಪ್‌ಲೈನ್ ಮೂಲಕ ಶಿವಪುರ ಕೆರೆಗೆ ಹರಿಸಲು ಕ್ರಮಕೈಗೊಂಡರು. ಈಗ ಕೆರೆಯ ಸುತ್ತಲಿನ ಗುಡ್ಡಬೆಟ್ಟಗಳಲ್ಲಿ ಬಿದ್ದ ಮಳೆ ನೀರು ಶಿವಪುರ ಕೆರೆಗೆ ಹರಿದು ಬಂದು, ಕೆರೆಯ ಒಡಲನ್ನು ತುಂಬಿಸುತ್ತಿದೆ. ಜನತೆಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಿದೆ.

ಇದನ್ನೊಂದು ವಾಯು ವಿಹಾರದ ತಾಣವನ್ನಾಗಿಸುವ ಉದ್ದೇಶದೊಂದಿಗೆ ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನ ₹೨.೫೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಯಿತು. ಆನಂತರ ೨೦೨೨-೨೩ನೇ ಸಾಲಿನಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನ ₹೧೩೨.೮೧ ಲಕ್ಷ ವೆಚ್ಚದಲ್ಲಿ ಕೆರೆಯ ಸುತ್ತ ತಂತಿ ಬೇಲಿ, ಸಿಸಿ ರಸ್ತೆ, ವಾಕಿಂಗ್ ಮಾಡುವವರು ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಬೆಂಚ್‌ಗಳ ವ್ಯವಸ್ಥೆ, ಪರ್ಗೋಲಾ, ಕೆರೆಯ ಸುತ್ತ ವಿದ್ಯುದ್ದೀಪ ಮುಂತಾದ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಕರ್ಸ್ ಅಸೋಸಿಯೇಷನ್:

ಶಿವಪುರ ಕೆರೆಯನ್ನು ಅಭಿವೃದ್ಧಿಪಡಿಸಿ, ವಾಕಿಂಗ್ ಮಾಡಲು ವಾಯುವಿಹಾರಿಗಳಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಿರುವುದರಿಂದ ಈ ಸ್ಥಳವು ವಾಕಿಂಗ್ ಮಾಡುವವರ ನೆಚ್ಚಿನ ತಾಣವಾಗಿದೆ. ಬೆಳಗ್ಗೆ ಹಾಗೂ ಸಂಜೆ ಸಂಡೂರಿನ ಹಲವಾರು ಜನರು ಕೆರೆಯ ಏರಿಯ ಮೇಲೆ ಪ್ರತಿನಿತ್ಯ ವಾಕಿಂಗ್ ಮಾಡುವುದನ್ನು ಕಾಣಬಹುದಾಗಿದೆ. ಇಲ್ಲಿ ವಾಕಿಂಗ್ ಮಾಡುವವರೆ ಸೇರಿಕೊಂಡು ಶಿವಪುರ ಕೆರೆ ವಾಕರ್ಸ್ ಅಸೋಸಿಯೇಷನ್ ರಚಿಸಿಕೊಂಡಿದ್ದಾರೆ. ಕೆರೆಯ ಪಕ್ಕದಲ್ಲಿಯೇ ಓಪನ್ ಏರ್ ಜಿಮ್ ನಿರ್ಮಿಸಲಾಗಿದೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ