ರಾಮನಗರ: ಕಾರ್ಮಿಕರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಗೆ 4 ಶ್ರಮಿಕ ವಸತಿ ಶಾಲೆಗಳನ್ನು ಮಂಜೂರು ಮಾಡಿದೆ.
ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಜೊತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಕಸ್ತೂರ ಬಾ ಶಾಲೆ, ಆದರ್ಶ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಕೇಂದ್ರೀಯ ವಿದ್ಯಾಲಯ. ನವೋದಯ ವಿದ್ಯಾಲಯ ಶಾಲೆಗಳಿವೆ. ಇವುಗಳ ಜೊತೆಗೆ ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸುಸಜ್ಜಿತ ಶ್ರಮಿಕ ವಸತಿ ಶಾಲೆಗಳು ಸೇರ್ಪಡೆಗೊಳ್ಳುತ್ತಿವೆ.
ಈ ಮೊದಲು ಜಿಲ್ಲೆಗೆ ಒಂದರಂತೆ ಶ್ರಮಿಕ ವಸತಿ ಶಾಲೆಗಳು ಮಂಜೂರಾಗಿತ್ತು. ಆ ಶಾಲೆಯನ್ನು ಕನಕಪುರ ಕ್ಷೇತ್ರದ ರಾಯಸಂದ್ರದಲ್ಲಿ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಇಲ್ಲಿವರೆಗೂ ಕಾರ್ಮಿಕ ಇಲಾಖೆಗೆ ಹಸ್ತಾಂತರಗೊಂಡಿಲ್ಲ. ಉಳಿದಂತೆ ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಜಾಗ ಗುರುತಿಸಿಕೊಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.6 -10 ಎಕರೆ ಜಾಗದಲ್ಲಿ ಶಾಲೆ ನಿರ್ಮಾಣ:
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಶ್ರಮಿಕ ವಸತಿ ಶಾಲೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 6ರಿಂದ 12ನೇ ತರಗತಿವರೆಗಿನ ಶಿಕ್ಷಣವು ಇಲ್ಲಿ ಸಿಗಲಿದೆ. ಸದ್ಯಕ್ಕೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಶ್ರಮಿಕ ವಸತಿ ಶಾಲೆಗಳಿಗೆ ಪ್ರವೇಶಾವಕಾಶ ನೀಡಲಾಗುತ್ತದೆ ಎನ್ನುವ ಮಾಹಿತಿಯಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾನಾ ವಲಯಗಳ ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಕಾರ್ಮಿಕರನ್ನು ಮಾತ್ರ ಸರ್ಕಾರಿ ಸೌಲಭ್ಯಗಳಿಗೆ ಪರಿಗಣಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ 43,115 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದಲ್ಲದೆ, 6700 ಅಸಂಘಟಿತ ಕಾರ್ಮಿಕರು ಇದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ರಾಮನಗರ ವೃತ್ತದಲ್ಲಿ 20280, ಚನ್ನಪಟ್ಟಣ ವೃತ್ತದಲ್ಲಿ 4776, ಕನಕಪುರ ವೃತ್ತದಲ್ಲಿ 12240 ಹಾಗೂ ಮಾಗಡಿ ವೃತ್ತದಲ್ಲಿ 5819 ಕಾರ್ಮಿಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ಕನಕಪುರ ಕ್ಷೇತ್ರದಲ್ಲಿ ಶ್ರಮಿಕ ವಸತಿ ಶಾಲೆಗಾಗಿ ಜಾಗ ಗುರುತಿಸಲಾಗಿದೆ. ಅದು ಕಾರ್ಮಿಕರ ಇಲಾಖೆಗೆ ನೋಂದಣಿಯಾಗಬೇಕಿದೆ. ಇದರೊಂದಿಗೆ ಈಗ ಬಜೆಟ್‌ನಲ್ಲಿ ಇನ್ನೂ ಮೂರು ಕ್ಷೇತ್ರಗಳಿಗೂ ಶ್ರಮಿಕ ವಸತಿ ಶಾಲೆ ಘೋಷಣೆಯಾಗಿದ್ದು, ಅದರ ಪ್ರಕ್ರಿಯೆಗಳು ಇನ್ನುಂದೆ ನಡೆಯಲಿವೆ. ಶ್ರಮಿಕ ವಸತಿ ಶಾಲೆಗಳಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ಎನ್ನಲಾಗಿದೆ. ಸರ್ಕಾರದ ಆದೇಶದಂತೆ ಕ್ರಮ ವಹಿಸಲಾಗುವುದು.
12ಕೆಆರ್ ಎಂಎನ್ 2,3.ಜೆಪಿಜಿ
3.ನಾಗೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ, ಬೆಂ.ದಕ್ಷಿಣ.