ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ಕೃಷ್ಣ ಎಲ್ಲಾ ಬಗೆಯ ಗುಣ, ಬಾಂಧವ್ಯಗಳನ್ನು ಹೊಂದಿದ್ದ ಮಹಾನ್ ಮಹೀಮ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕೃಷ್ಣ ಅಸಂಖ್ಯಾತ ಬಾಲಲೀಲೆಗಳ ಪ್ರತಿನಿಧಿ. ಅಮರ ಪ್ರೇಮದ ಸಂಕೇತವಾಗಿದ್ದರು. ಅಲ್ಲದೆ, ಅಪ್ರತಿಮ ತಂತ್ರಜ್ಞಾನಿ. ಇಡೀ ಜಗತ್ತನ್ನು ತನ್ನ ಶಕ್ತಿ- ಯುಕ್ತಿಗಳಿಂದ ಇಟ್ಟುಕೊಳ್ಳುವಂತಹ ಮಹಾನ್ ವ್ಯಕ್ತಿ ಶ್ರೀಕೃಷ್ಣ ಎಂದರು.
ಕೃಷ್ಣ ಅಸಾಧ್ಯ ಬುದ್ಧಿವಂತ ಜೊತೆಗೆ ತನ್ನ ಸ್ನೇಹಿತರಿಗೆ ಉತ್ತಮ ಗೆಳೆಯನಾಗಿದ್ದ. ಯುದ್ಧತಂತ್ರ ಕಲೆ, ಯುದ್ಧ ಮುನ್ನಡಿಸುವ ಕಲೆ, ಯುದ್ಧ ನಡೆಯದಂತೆ ತಡೆಯುವ ಬುದ್ಧಿಜೀವಿಯಾಗಿದ್ದನು. ಇಡೀ ಲೋಕದ ಒಳಿತಿಗೆ ಪ್ರತಿಯೊಬ್ಬ ಮನುಷ್ಯನೂ ಹೇಗೆ ಇರಬೇಕೆಂಬ ವಿವೇಕವನ್ನು ತಿಳಿಸಿದ ದೈವ ವ್ಯಕ್ತಿತ್ವವೇ ಶ್ರೀ ಕೃಷ್ಣ ಎಂದು ಅವರು ಹೇಳಿದರು.ಧರ್ಮರಾಜ್ಯ ಸ್ಥಾಪನೆಗಾಗಿ ನಾವು ಮಾಡುವ ಕಾಯಕದಲ್ಲಿ ನಿಷ್ಠೆಯಿರಬೇಕು ಎಂಬುದನ್ನು ಗೀತೆಯ ಮೂಲಕ ತಿಳಿಸಿದ ಅಪ್ರತಿಮ ವ್ಯಕ್ತಿ ಶ್ರೀ ಕೃಷ್ಣ ಎಂದರು.
ಹಿರಿಯ ಸಾಹಿತಿ ಡಾ.ಎನ್.ಕೆ. ರಾಮಶೇಷನ್ ಮಾತನಾಡಿ, ದ್ವಾಪರಯುಗದಲ್ಲಿ ಅಧರ್ಮವನ್ನು ನಾಶಪಡಿಸಲು ಮತ್ತು ಜಗತ್ತಿನಲ್ಲಿ ಸದಾಚಾರವನ್ನು ನೀಡಲು ಜನಿಸಿದಂತಹ ವ್ಯಕ್ತಿಯೇ ಶ್ರೀ ಕೃಷ್ಣ. ಅಲ್ಲಿಯವರೆಗೆ ನರಳುತ್ತಿದ್ದ ಮನುಕುಲಕ್ಕೆ ಶ್ರೀಕೃಷ್ಣನ ಜನನ ಆಶಾಕಿರಣ ಮೂಡಿಸಿತು ಎಂದು ತಿಳಿಸಿದರು.ಶ್ರೀ ಕೃಷ್ಣ ಎಲ್ಲವನ್ನೂ ಬಲ್ಲವನು. 18 ಅಕ್ಷೋಹಿಣಿ ಸೈನ್ಯವನ್ನು ತಿಳಿದವನು. ಮಥುರಾ ಮತ್ತು ಗೋಕುಲದಲ್ಲಿ ಇದ್ದ ಕೃಷ್ಣ. ರಾಜ್ಯವನ್ನಾಳದಿದ್ದರೂ ರಾಜ್ಯವನ್ನು ಆಳಿಸಿ, ರಾಜ್ಯದ ರಾಜ್ಯಭಾರ ಮಾಡುತ್ತಿದ್ದನು. ಸಂಸ್ಕೃತ ಬಲ್ಲವನಾದ ಶ್ರೀಕೃಷ್ಣ ಸಂಸ್ಕೃತಿಯ ಒಡೆಯ, ನಾಯಕ, ರಕ್ಷಕ ಎಂದು ಹೇಳಬಹುದು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ. ಅಶೋಕ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ನಿವೃತ್ತ ಅಧಿಕಾರಿ ಡಾ.ಕಾ. ರಾಮೇಶ್ವರಪ್ಪ ಮೊದಲಾದವರು ಇದ್ದರು.