ಬಿಜೆಪಿ ಕೋರ್ ಕಮಿಟಿ ಸಭೆಗೆ ಸಿದ್ದೇಶ್ವರ-ಹರೀಶ ಟೀಂ ಗೈರು!

KannadaprabhaNewsNetwork |  
Published : Oct 31, 2025, 01:30 AM IST
30ಕೆಡಿವಿಜಿ8-ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ಜಿಲ್ಲಾ ವೀಕ್ಷಕರಾದ ಅರಗ ಜ್ಞಾನೇಂದ್ರ, ಪ್ರೀತಂ ಗೌಡ ನೇತೃತ್ವದಲ್ಲಿ ನಡೆದಿದ್ದು, ಎಸ್.ಎ.ರವೀಂದ್ರನಾಥ-ಎಂ.ಪಿ.ರೇಣುಕಾಚಾರ್ಯ ಗುಂಪು ಭಾಗಿಯಾದರೆ, ಜಿ.ಎಂ.ಸಿದ್ದೇಶ್ವರ-ಬಿ.ಪಿ.ಹರೀಶ ಗುಂಪು ಸಭೆಯಿಂದ ದೂರವೇ ಉಳಿದಿತ್ತು. | Kannada Prabha

ಸಾರಾಂಶ

ಮನೆಯೊಂದು ಮೂರು ಬಾಗಿಲು ಎಂಬಂತಾದ ದಾವಣಗೆರೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ಮಾಡಿ, ವಾತಾವರಣ ತಿಳಿಗೊಳಿಸುವ ಪ್ರಯತ್ನವು ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ!

- ರವೀಂದ್ರನಾಥ-ರೇಣುಕಾಚಾರ್ಯ ಗುಂಪು ಆರಗ- ಪ್ರೀತಂ ನೇತೃತ್ವದ ಸಭೆಗೆ ಭಾಗಿ - ಸುದ್ದಿಗೋಷ್ಠಿ ಮಧ್ಯೆ ಸಿದ್ದೇಶ್ವರ ಭೇಟಿಗೆ ತೆರಳಿದ ಪ್ರೀತಂ, ರೇಣು ವಿರುದ್ಧ ಮತ್ತೆ ಕಿಡಿ

- - -

ನಾಗರಾಜ ಎಸ್. ಬಡದಾಳ್‌ ಕನ್ನಡಪ್ರಭ ವಾರ್ತೆ ದಾವಣಗೆರೆ ಮನೆಯೊಂದು ಮೂರು ಬಾಗಿಲು ಎಂಬಂತಾದ ದಾವಣಗೆರೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ಮಾಡಿ, ವಾತಾವರಣ ತಿಳಿಗೊಳಿಸುವ ಪ್ರಯತ್ನವು ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ!

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ವೀಕ್ಷಕರಾಗಿ ಆಗಮಿಸಿದ್ದರು. ಆದರೆ, ಎರಡೂ ಗುಂಪಿನವರ ಸಭೆಗೆ ಒಂದು ಬಣ ಮಾತ್ರವೇ ಬಂದರೆ, ಮತ್ತೊಂದು ಗುಂಪು ದೂರವೇ ಉಳಿಯುವ ಮೂಲಕ ಇಲ್ಲಿನ ಗಂಟನ್ನು ಬಿಚ್ಚಬೇಕಾದವರು ದೆಹಲಿ ನಾಯಕರೇ ಎಂಬ ಸಂದೇಶ ರವಾನಿಸಿದೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಇತರರು ಕೋರ್ ಕಮಿಟಿ ಸಭೆಗೆ ಹಾಜರಾಗಿದ್ದರು. ಆದರೆ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ, ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್ ಇತರರು ಗೈರಾಗುವ ಮೂಲಕ ಕೋರ್ ಕಮಿಟಿ ಸಭೆ ಒಂದು ಗುಂಪಿನವರಿಗಷ್ಟೇ ಸೀಮಿತವಾಗುವಂತೆ ಮಾಡಿದ್ದಾರೆ.

ದಾವಣಗೆರೆ ಬಿಜೆಪಿ ಬಣಗಳ ಆಟಕ್ಕೆ ಬ್ರೇಕ್ ಹಾಕಲು ಕೋರ್ ಕಮಿಟಿ ಸಭೆ ಕರೆಯಲು ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ ದಾಸ್ ಅಗರವಾಲ್ ಈಚೆಗೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಗುರುವಾರ ಕರೆದಿದ್ದ ಕೋರ್ ಕಮಿಟಿ ಸಭೆಯೆ ರೇಣುಕಾಚಾರ್ಯ- ರವೀಂದ್ರನಾಥ ಗುಂಪು ಇಡಿಯಾಗಿ ಭಾಗವಹಿದ್ದರೆ, ಸಿದ್ದೇಶ್ವರ- ಹರೀಶ್‌ರ ಗುಂಪು ಮಾತ್ರ ದೂರವೇ ಉಳಿಯುವ ಮೂಲಕ ಇಲ್ಲಿನ ಗುಂಪುಗಳ ಹೊಯ್ದಾಟದ ಯಾವ ಮಟ್ಟಕ್ಕಿದೆಯೆಂಬ ಸಂದೇಶವನ್ನೂ ನೀಡಿದೆ.

ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ಅಗರವಾಲ್ ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ, ಮಾಜಿ ಸಚಿವ ರೇಣುಕಾಚಾರ್ಯ ಗುಂಪುಗಳ ಪ್ರತ್ಯೇಕವಾಗಿ ತಲಾ ಒಂದೂವರೆ ಗಂಟೆ ಸಭೆ ಮಾಡಿ ಚರ್ಚಿಸಿತ್ತು. ಅನಂತರ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಕೋರ್ ಕಮಿಟಿ ಸಭೆ ಮಾಡಿ, ವರದಿ ನೀಡುವಂತೆ, ಸಭೆಗೆ ಗೈರಾದವರ ಮಾಹಿತಿ ನೀಡಲು ಸೂಚನೆ ನೀಡಿದ್ದರು.

ಸಭೆ ನಂತರ ಸುದ್ದಿಗೋಷ್ಠಿ ಮಧ್ಯೆ ಕೇಂದ್ರದ ಮಾಜಿ ಜಿ.ಎಂ. ಸಿದ್ದೇಶ್ವರ ಭೇಟಿ ಮಾಡಲು ವೀಕ್ಷಕರಾಗಿದ್ದ ಪ್ರೀತಂ ಗೌಡ ತೆರಳಿದ್ದರು. ಅಲ್ಲಿ ಸಿದ್ದೇಶ್ವರ ಗುಂಪಿನವರಿಂದ ಅಹವಾಲು ಆಲಿಸಿದ್ದಲ್ಲದೇ, ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ಸಿನವರ ಜೊತೆಗೆ ಎದುರಾಳಿ ಬಣದವರು ಹೇಗೆಲ್ಲಾ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ, ಅಲ್ಲಿಯವರೆಗೆ ಯಾವುದೇ ಸಭೆಗೂ ಬರುವುದಿಲ್ಲವೆಂದು ಸಿದ್ದೇಶ್ವರ ಪಟ್ಟುಹಿಡಿದಿದ್ದಾರೆ. ಅಲ್ಲದೇ, ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ವಿರುದ್ಧ ಭೂ ಕಬಳಿಕೆ ವಿರುದ್ಧ ಶಾಸಕ ಹರೀಶ ಆರೋಪ ಮಾಡಿ, ಸದನದಲ್ಲೂ ಪ್ರಸ್ತಾಪಿಸಿದ್ದರು. ಈ ಬಗ್ಗೆ ಬಿಜೆಪಿ ಜಿಲ್ಲಾ ಘಟಕದಿಂದ ಒಂದೇ ಒಂದು ಹೋರಾಟವೂ ನಡೆದಿಲ್ಲ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾರೆ ಸರಿ. ಆದರೆ, ಇಲ್ಲಿನ ಸಚಿವರ ವಿರುದ್ಧ ಯಾಕೆ ಚಕಾರವನ್ನೂ ಎತ್ತುತ್ತಿಲ್ಲ ಎಂದು ದಾವಣಗೆರೆ ವಿಭಾಗದ ಉಸ್ತುವಾರಿ ಪ್ರೀತಂ ಗೌಡಗೆ ಸಿದ್ದೇಶ್ವರ ಪ್ರಶ್ನಿಸಿದರು.

ಮತ್ತೊಂದು ಕಡೆ ಪಕ್ಷ ಸೂಚಿಸಿದ ಎಲ್ಲ ಹೋರಾಟ ಮಾಡಿದ್ದೇವೆಂದು ರೇಣುಕಾಚಾರ್ಯ ವಾದ ಮಾಡಿದ್ದಾರೆ. ಜಿಲ್ಲಾಡಳಿತದ ವಿರುದ್ಧ ಅತಿ ಹೆಚ್ಚು ಹೋರಾಟ ನಡೆಸಿದ್ದೇವೆ. ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಿದರೆ ಸಚಿವರ ವಿರುದ್ಧವೇ ಹೋರಾಡಿದಂತೆ ಎಂಬುದಾಗಿ ರೇಣುಕಾಚಾರ್ಯ ಸಮರ್ಥನೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರಗ ಜ್ಞಾನೇಂದ್ರ ಕಾರಣಾಂತರದಿಂದ ಜಿ.ಎಂ. ಸಿದ್ದೇಶ್ವರ, ಬಿ.ಪಿ.ಹರೀಶ ಸಭೆಗೆ ಬಂದಿಲ್ಲವಷ್ಟೇ ಎಂಬುದಾಗಿ ಸಾಗ ಹಾಕಿದರು. ಮತ್ತೊಂದು ಕಡೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸಕ್ಕೆ ಅರಗ ಜ್ಞಾನೇಂದ್ರ, ಪ್ರೀತಂ ಗೌಡ ಭೇಟಿ ನೀಡಿ, ಚರ್ಚಿಸಿದರು.

- - -

(ಬಾಕ್ಸ್‌)

* ಗುಂಪುಗಾರಿಕೆ, ಹೈರಾಣಾದ ಜಿಲ್ಲಾಧ್ಯಕ್ಷ!

- ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿಯಲ್ಲಿ ರಾಜಶೇಖರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತ್ರ ಪಕ್ಷದಲ್ಲಿ ವಿದ್ಯಾರ್ಥಿ ಹಂತ, ಸಂಘ ಪರಿವಾರದಿಂದ ಬಂದ ಯುವ ಕಾರ್ಯಕರ್ತ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಜಿಲ್ಲಾ ಬಿಜೆಪಿಯ ಗುಂಪುಗಾರಿಕೆಯಲ್ಲಿ ಹೈರಾಣಾಗಿರುವ ಯುವ ಮುಖಂಡ.

ಅತ್ತ ದರಿ, ಇತ್ತ ಪುಲಿ ಎಂಬಂತೆ ಅಸಹಾಯಕ ಸ್ಥಿತಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂಬುದೇ ತೋಚದೇ ಜಿಲ್ಲಾಧ್ಯಕ್ಷರು ತೊಳಲಾಡುವ ಸ್ಥಿತಿಯಲ್ಲಿದ್ದಾರೆ. ಆದರೆ, ರಾಜ್ಯ ಉಸ್ತುವಾರಿಗಳ ಸೂಚನೆಯಂತೆ ನಾನು ಸಭೆ ನಡೆಸಿ, ಸಂಘನಾತ್ಮಕ ವಿಚಾರದ ಬಗ್ಗೆ ಚರ್ಚಿಸಿದ್ದು, ನಾನು ಅಧ್ಯಕ್ಷನಾಗಲು ಯಾವ ಬಣದವರೂ ನನ್ನ ಹೆಸರನ್ನು ಶಿಫಾರಸು ಮಾಡಿರಲಿಲ್ಲ. ಸಭೆ ಹಾಗೂ ಸಂಘಟನಾತ್ಮಕ ಜವಾಬ್ಧಾರಿ ಕಾರ್ಯಪಾಲನಾ ವರದಿಯನ್ನು ವರಿಷ್ಠರಿಗೆ ಸಲ್ಲಿಸುವೆ ಎಂಬುದಾಗಿ ಮಾಧ್ಯಮದವರಿಗೆ ಜಿಲ್ಲಾಧ್ಯಕ್ಷ ಪ್ರತಿಕ್ರಿಯಿಸಿದ್ದಾರೆ.

- - -

-30ಕೆಡಿವಿಜಿ8:

ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ವೀಕ್ಷಕರಾದ ಆರಗ ಜ್ಞಾನೇಂದ್ರ, ಪ್ರೀತಂ ಗೌಡ ನೇತೃತ್ವದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆದಿದ್ದು, ಎಸ್.ಎ.ರವೀಂದ್ರನಾಥ- ಎಂ.ಪಿ.ರೇಣುಕಾಚಾರ್ಯ ಗುಂಪು ಭಾಗಿಯಾದರೆ, ಜಿ.ಎಂ.ಸಿದ್ದೇಶ್ವರ- ಬಿ.ಪಿ.ಹರೀಶ ಗುಂಪು ಸಭೆಯಿಂದ ದೂರವೇ ಉಳಿಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು