ವಿನಯ್‌ ಮನೆಯಲ್ಲಿ ಮೌನ, ನಗರಾದ್ಯಂತ ಬಿಗಿ ಭದ್ರತೆ

KannadaprabhaNewsNetwork |  
Published : Apr 16, 2026, 02:15 AM IST
ಶಾಸಕ ವಿನಯ ಕುಲಕರ್ಣಿ ನಿವಾಸ. | Kannada Prabha

ಸಾರಾಂಶ

ಯೋಗೇಶಗೌಡ ಸಹೋದರ ಗುರುನಾಥಗೌಡ ನಿವಾಸ, ಪತ್ನಿ ಮಲ್ಲಮ್ಮನ ನಿವಾಸಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಇದರೊಂದಿಗೆ ಧಾರವಾಡದ ಆಯಕಟ್ಟಿನ ಸ್ಥಳ, ಗ್ರಾಮೀಣ ಕ್ಷೇತ್ರಾದ್ಯಂತ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಧಾರವಾಡ:

ಜಿಪಂ ಮಾಜಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿ ಮನೆ ಎದುರು ನೀರವ ಮೌನ ಆವರಿಸಿದೆ. ಇನ್ನೊಂದೆಡೆ ಮುಂಜಾಗ್ರತಾ ಕ್ರಮವಾಗಿ ಇಡೀ ನಗರಾದ್ಯಂತ ಬಿಗಿಭದ್ರತೆ ಏರ್ಪಡಿಸಲಾಗಿದೆ.ವಿನಯ್‌ ಕುಲಕರ್ಣಿ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ. ವಿನಯ್‌ಗೆ ಜಿಲ್ಲೆ ಪ್ರವೇಶಕ್ಕೆ ಅವಕಾಶವಿಲ್ಲ. ಅವರ ಎಲ್ಲ ಕೆಲಸಗಳನ್ನು ಪತ್ನಿ ಶಿವಲೀಲಾ ಕುಲಕರ್ಣಿ ಅವರೇ ನಿಭಾಯಿಸುತ್ತಾರೆ. ಆದರೂ ಕುಲಕರ್ಣಿ ಅವರ ಮನೆ ಎದುರಿಗೆ ಪ್ರತಿನಿತ್ಯ ನೂರಾರು ಕಾರ್ಯಕರ್ತರು ಇದ್ದೇ ಇರುತ್ತಿದ್ದರು. ಬುಧವಾರ ಕೋರ್ಟ್‌ ತೀರ್ಪು ಇದ್ದ ಹಿನ್ನೆಲೆಯಲ್ಲಿ ಪತ್ನಿ, ಮಕ್ಕಳೆಲ್ಲರೂ ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ಮನೆ ಎದುರಿಗೆ ಯಾರೂ ಇಲ್ಲದ ಕಾರಣ ಮೌನ ಆವರಿಸಿದೆ. ನಿವಾಸಕ್ಕೆ ಪೊಲೀಸ್‌ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.ಯೋಗೇಶಗೌಡ ನಿವಾಸಕ್ಕೆ ಭದ್ರತೆ:

ಇನ್ನು ಯೋಗೇಶಗೌಡ ಸಹೋದರ ಗುರುನಾಥಗೌಡ ನಿವಾಸ, ಪತ್ನಿ ಮಲ್ಲಮ್ಮನ ನಿವಾಸಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಇದರೊಂದಿಗೆ ಧಾರವಾಡದ ಆಯಕಟ್ಟಿನ ಸ್ಥಳ, ಗ್ರಾಮೀಣ ಕ್ಷೇತ್ರಾದ್ಯಂತ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಕಮಿಷನರ್‌ ಶಶಿಕುಮಾರ ಹಾಗೂ ಎಸ್ಪಿ ಗುಂಜನ ಆರ್ಯ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ.ಎಲ್ಲೆಡೆ ಇದೇ ಚರ್ಚೆ

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿರುವ ವಿಷಯವೇ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

ವಿನಯ್‌ ಅಭಿಮಾನಿಗಳಲ್ಲಿ ಇದಕ್ಕೆ ಬೇಸರ ವ್ಯಕ್ತಪಡಿಸುತ್ತಲೇ, ವಿಕೆ ಬಾಸ್‌ಗೆ ಹೀಗೆ ಆಗಬಾರದಿತ್ತು. ಆದರೂ ಅವರು ಮೇಲ್ಮನವಿ ಸಲ್ಲಿಸುತ್ತಾರೆ. ಮತ್ತೆ ಹೊರಗೆ ಬರುತ್ತಾರೆ ನೋಡ್ತಾ ಇರಿ.. ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಬಿಜೆಪಿಗರು, ಕೊನೆಗೂ ಯೋಗೇಶಗೌಡ ಸಾವಿಗೆ ನ್ಯಾಯ ಸಿಕ್ಕಂತಾಯ್ತು ಅಲ್ವಾ ಎಂದು ಹೇಳಿಕೊಳ್ಳುತ್ತಿದ್ದಾರೆ.

ಮುಂದೆ ಏನಾಗಬಹುದು? ವಿನಯ್‌ಗೆ ಎಷ್ಟು ಪ್ರಮಾಣದ ಶಿಕ್ಷೆಯಾಗಬಹುದು? ಅವರ ಶಾಸಕತ್ವಕ್ಕೆ ತೊಂದರೆಯಾಗುತ್ತದೆಯೇ? ಎಂಬೆಲ್ಲ ವಿಷಯಗಳು ಚರ್ಚೆಗೆ ಗ್ರಾಸವನ್ನುಂಟು ಮಾಡಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮವೇ ಪ್ರಪಂಚಕ್ಕೆ ಆಧಾರ ನಮ್ಮದು ಮಾತ್ರ ಧರ್ಮ ಉಳಿದವು ಮತಗಳು: ವಿಧುಶೇಖರ ಶ್ರೀಗಳು
ಲ್ಯಾಂಡ್ ಜಿಹಾದ್: ಪ್ರಮೋದ್ ಮುತಾಲಿಕ್ ಆಕ್ರೋಶ