ಸಿಂದಗಿ : ಸತತ 51ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ನಮ್ಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ ಎಂದು ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ಗುರುಬಸಪ್ಪ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯನ್ನು 1974ರಲ್ಲಿ ಅನಧಿಕೃತವಾಗಿ ವಕ್ಫ್ ಬೋರ್ಡ್ ತನ್ನ ಹೆಸರಿಗೆ ಮಾಡಿಕೊಂಡಿತ್ತು. ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಿ ಕಳೆದ 2024ರಲ್ಲಿ ರಾಜ್ಯಾದ್ಯಂತ ವಕ್ಫ್‌ಬೋರ್ಡ್ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು. ಆ ಸಂದರ್ಭದಲ್ಲಿ ನಮ್ಮ ಮಠದ 600 ವರ್ಷಗಳ ಇತಿಹಾಸದ ದಾಖಲೆಗಳನ್ನು ಸರ್ಕಾರದ ಮುಂದಿಟ್ಟಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು, ಇಂಡಿ ಉಪವಿಭಾಗಾಧಿಕಾರಿಗಳ ಅವರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವ್ಯಾಜ್ಯ ನಡೆಸಲಾಯಿತು.
ಈ ಪ್ರಕರಣದಲ್ಲಿ ಪಕ್ಷಗಾರರಾಗಿ ಸಿಂದಗಿ ವಿರಕ್ತಮಠ ಸೇವಾ ಸಮಿತಿ ವಿರಕ್ತಮಠ ಸಿಂದಗಿ (ಬಿಳೂರ) ಗೌರವಾಧ್ಯಕ್ಷ ಗುರುಬಸವ ಚನ್ನಬಸವ ಮಹಾಸ್ವಾಮಿಗಳು ಪ್ರಕರಣದಲ್ಲಿ ಪಾರ್ಟಿಗಳಾಗಿ ಸಿಂದಗಿ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ, ವಿಜಯಪುರ ಜಿಲ್ಲಾ ವಕ್ಫ್‌ಬೋರ್ಡ್ ಆಗಿದ್ದರು.
ಈ ಪ್ರಕರಣ 2024ರ ಡಿ.19 ರಂದು ದಾಖಲಾಗಿತ್ತು. ಪ್ರಕರಣ ಸತತ 11 ತಿಂಗಳಿನಿಂದ ವಾದಿ, ಪ್ರತಿವಾದಗಳು ನಡೆದು ಕೊನೆಗೆ 2025ರ ನ.28 ರಂದು ಈ ವಿರಕ್ತಮಠದ ಆಸ್ತಿಯನ್ನು ವಕ್ಫ್‌ಬೋರ್ಡ್‌ನಿಂದ ಮುಕ್ತಗೊಳಿಸಿ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ಸಂಬಂಧಿಸಿದ ಆಸ್ತಿ ಈ ಆಸ್ತಿಗೂ ವಕ್ಫಬೋರ್ಡ್‌ಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ ಎಂದು ತಿಳಿಸಿದ್ದಾರೆ.