ಹೊಸಪೇಟೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದುಹಾಕಲು ಹಾಗೂ ಪ್ರೊಜಿನಿ ಮ್ಯಾಪಿಂಗ್ ಮಾಡಲು ಜೂ.16ರವರೆಗೆ ಅವಕಾಶವಿದೆ. ಆ ಬಳಿಕ ಪೋರ್ಟಲ್ ಫ್ರೀಜ್ ಆಗಲಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಯಾವುದೇ ಬದಲಾವಣೆಗಳಿಗೆ ಅವಕಾಶವಿಲ್ಲ ಎಂದರು.
ಮತಗಟ್ಟೆ ಅಧಿಕಾರಿಗಳಿಗೆ ಸಿದ್ಧತೆ, ತರಬೇತಿ ಮತ್ತು ಮುದ್ರಣವು ಜೂ.20ರಿಂದ 29ರವರೆಗೆ ನಡೆಯಲಿದೆ. ನಂತರ ಮತಗಟ್ಟೆ ಮಟ್ಟದ ಬಿಎಲ್‍ಒಗಳು ಮನೆ ಮನೆ ಭೇಟಿಯು ಜೂ.30ರಿಂದ ಜುಲೈ 29ರವರೆಗೆ ಪ್ರತಿ ಮನೆಗೆ ಒಟ್ಟು 3 ಬಾರಿ ಭೇಟಿ ನೀಡಿ ಪರಿಶೀಲನಾ ಪಟ್ಟಿ ನೀಡಿ ಮತದಾರರಿಂದ ಸಹಿ ಪಡೆಯುವರು. ನಂತರ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಿದ್ದು, ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯನ್ನು ಅಕ್ಟೋಬರ್ 7 ರಂದು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ ಎಂದರು.ಮತದಾರರ ನೋಂದಣಿ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ; ಸಾರ್ವಜನಿಕರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಹೆಸರು ಸೇರ್ಪಡೆಗಾಗಿ ಇನ್ನು ಮುಂದೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಆಯಾ ಭಾಗದ ಬಿಎಲ್‍ಒಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ, ಆನ್‍ಲೈನ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಮತ್ತು ಸಣ್ಣಪುಟ್ಟ ತಿದ್ದುಪಡಿಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿನ ಐದು ವಿಧಾನಸಭಾ ಕ್ಷೇತ್ರಗಳಿಂದ 1234 ಮತಗಟ್ಟೆಗಳಿದ್ದು 565999 ಪುರುಷ, 576735 ಮಹಿಳಾ, 127 ಇತರೆ ಸೇರಿ 1142861 ಮತದಾರರಿದ್ದಾರೆ.
ಈಗಾಗಲೇ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ ನಡೆಸಿ ಸೂಕ್ತ ಮಾಹಿತಿ ನೀಡಲಾಗಿದೆ. ಬಿಎಲ್‍ಒಗಳಿಗೆ ಸಹಕರಿಸಲು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತಿ ರಾಜಕೀಯ ಪಕ್ಷಗಳು ತಮ್ಮ ಬಿಎಲ್‍ಎ ಗಳನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಉಪಸ್ಥಿತರಿದ್ದರು.