ಪ್ರತಿಭಾವಂತರನ್ನು ಸಮಾಜ ಹೊತ್ತು ಮೆರೆಯುತ್ತದೆ: ಎಂ.ಎಸ್‌. ನೇತ್ರಪಾಲ್

KannadaprabhaNewsNetwork | Published : Jul 22, 2024 1:20 AM

ಸಾರಾಂಶ

ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಒಂದು ದೊಡ್ಡ ತಿರುವು. ಈ ಹಂತದಲ್ಲಿ ಪೋಷಕರು ಮತ್ತು ಶಿಕ್ಷಕ ವೃಂದ ಉತ್ತಮ ಮಾರ್ಗದರ್ಶನ ನೀಡಿದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯ್ಯುವರು. ವಿದ್ಯಾರ್ಥಿಗಳು ಸಾಧನೆ ಮಾಡಲು ಸತತ ಪರಿಶ್ರಮ, ಗುರಿ ಮತ್ತು ನಿರಂತರ ಅಭ್ಯಾಸದ ಮೂಲಕ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಓದಿನ ಹಸಿವು ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಅವಕಾಶಗಳನ್ನು ಬಳಸಿಕೊಂಡು ಸಾಧನೆಗೆ ಸಿದ್ಧವಾಗಬೇಕು.

ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ಅತ್ಯುತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಸಮಾಜ ಮೆರವಣಿಗೆ ಮಾಡುತ್ತದೆ. ಅದೇ ಸೋಮಾರಿಗಳಾಗಿ ಎಲ್ಲೋ ಮೂಲೆಯಲ್ಲಿ ಕುಳಿತರೇ ಸಮಾಜ ಗುರುತಿಸುವುದಿಲ್ಲ, ಅಲ್ಲದೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಉತ್ತಜಿಸಬೇಕು ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂ.ಎಸ್. ನೇತ್ರಾಪಾಲ್ ತಿಳಿಸಿದರು.

ಪಟ್ಟಣದ ಬಾಬು ಜಗಜೀವನ್ ರಾಂ ಸಮುದಾಯ ಭವನದಲ್ಲಿ ರಾಜ್ಯ ಅರುಂಧತಿ ನೌಕರರ ಸಂಘ ಮತ್ತು ತಾಲೂಕು ಅರುಂಧತಿ ಸಹಕಾರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಒಂದು ದೊಡ್ಡ ತಿರುವು. ಈ ಹಂತದಲ್ಲಿ ಪೋಷಕರು ಮತ್ತು ಶಿಕ್ಷಕ ವೃಂದ ಉತ್ತಮ ಮಾರ್ಗದರ್ಶನ ನೀಡಿದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯ್ಯುವರು ಎಂದರು.

ವಿದ್ಯಾರ್ಥಿಗಳು ಸಾಧನೆ ಮಾಡಲು ಸತತ ಪರಿಶ್ರಮ, ಗುರಿ ಮತ್ತು ನಿರಂತರ ಅಭ್ಯಾಸದ ಮೂಲಕ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಓದಿನ ಹಸಿವು ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಅವಕಾಶಗಳನ್ನು ಬಳಸಿಕೊಂಡು ಸಾಧನೆಗೆ ಸಿದ್ಧವಾಗಬೇಕು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರ ಕಾರ್ಯದರ್ಶಿ ಡಾ.ಎಚ್. ನಟರಾಜು ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದರೆ ಸಾಲದು, ಅಂಕಗಳನ್ನು ಸಾಧನೆಯಾಗಿ ಪರಿವರ್ತಿಸಕೊಳ್ಳಬೇಕು. ಸಾಧನೆಗೆ ಒಂದು ಕನಸನ್ನು ಇಟ್ಟುಕೊಳ್ಳಬೇಕು. ಮಾದಿಗ ಸಮುದಾಯ ಪ.ಜಾತಿಯಲ್ಲಿ ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದೆ. ನಮ್ಮ ಸಮುದಾಯ ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕಿದ್ದಲ್ಲಿ ಸಮುದಾಯದ ಯುವ ಸಮೂಹ ಉನ್ನತ ಶೈಕ್ಷಣಿಕ ಅರ್ಹತೆ ಪಡೆಯುವ ಕಡೆ ಹೆಚ್ಚು ಗಮನಹರಿಸಬೇಕು ಎಂದರು.

ಚಾಮರಾಜನಗರ ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಸವಿತಾ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು. ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಗಳಿಸಿದ ಪ್ರತಿಭಾನ್ವಿತ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪಿರಿಯಾಪಟ್ಟಣ ಪ್ರೋಬೆಷನರಿ ತಹಸೀಲ್ದಾರ್ ಭೀಮರಾವ್, ಸಹಾಯಕ ಲೆಕ್ಕಧಿಕಾರಿ ಸುರೇಖಾ, ತಾಲೂಕು ಯೋಜನಾಧಿಕಾರಿ ಡಾ. ರಂಗಸ್ವಾಮಿ, ಸಂಘದ ಅಧ್ಯಕ್ಷ ಕೆ. ಕೆಂಚಯ್ಯ, ಡಿ. ಸ್ವಾಮಿ, ಸಹಕಾರ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ, ಬಿ. ಮಂಜುನಾಥ್, ಅರುಂಧತಿ ನೌಕರರ ಸಂಘದ ರವೀಂದ್ರ, ಶಿಕ್ಷಕರಾದ ಹರಳಯ್ಯ, ಲಿಂಗಣ್ಣ, ಟಿ.ಪಿ. ಕೆಂಪರಾಜು, ಪುರಸಭೆ ಸದಸ್ಯ ಮಂಜುನಾಥ್, ತಾಲೂಕು ಬಾಬು ಜಗಜೀವನ್ ರಾಂ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ತಲಕಾಡು ದೊರೆಸ್ವಾಮಿ, ಬನ್ನೂರು ಸುನಿಲ್, ಹುಣಸೂರು ರಾಚಪ್ಪ, ಭಾನುಪ್ರಕಾಶ್, ಮಾದಪ್ಪ ಮಾದಿಗರ್, ಎಎಸ್ಐ ಲಿಂಗರಾಜು, ಎಂ.ಕೆ. ಸಿದ್ದರಾಜು, ನಾಗಣ್ಣ, ಎನ್. ವಿಶ್ವನಾಥ್, ನವೀನ್ ರಾಜ್ ಇದ್ದರು.

Share this article