ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಸರದಿ ಕೆ.ವಿ.ಮಹದೇಶ್ ಅರ್ಚಕರ ಅಧ್ಯಕ್ಷತೆಯಲ್ಲಿ ಮಹದೇಶ್ವರನಿಗೆ ಮುಂಜಾನೆಯಿಂದಲೇ ಬಿಲ್ವಪತ್ರೆ, ಹಾಲು ಮೊಸರು ಸೇರಿದಂತೆ ಇನ್ನಿತರ ಅಭಿಷೇಕ, ವಿಶೇಷ ಪೂಜೆ ಕಾರ್ಯಕ್ರಮಗಳು, ದೂಪದ ಸೇವೆ ಮಹಾಮಂಗಳಾರತಿ ನಡೆಯಿತು.
ವಿಶೇಷ ಉತ್ಸವಗಳು: ಬೆನಕನ ಅಮಾವಾಸ್ಯೆ ಪ್ರಯುಕ್ತ ಹರಕೆ ಹೊತ್ತ ಮಾದಪ್ಪನ ಭಕ್ತಾದಿಗಳಿಂದ ಬೆಳಗ್ಗೆ 8 ಗಂಟೆ ಸಮಯದಲ್ಲಿ ಬೆಳ್ಳಿ ರಥೋತ್ಸವ ಹಾಗೂ ಹುಲಿವಾಹನ ಉತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವ ಮಲೆ ಮಹದೇಶ್ವರ ಉತ್ಸವ, ಬಸವ ಮುಡಿಸೇವೆ, ದೂಪದ ಸೇವೆ, ಪಂಜಿನ ಸೇವೆ ಹಾಗೂ ಉರುಳು ಸೇವೆ ನಡೆಯಿತು. ಈ ವೇಳೆ ಭಕ್ತರು "ಉಘೇ ಮಾದಪ್ಪ " "ಉಘೇ " ಎಂದು ನಾಮಸ್ಮರಣೆ ಮಾಡುವ ಮೂಲಕ ಜಯ ಘೋಷ ಹಾಕಿದರು.ವಿಶೇಷ ದಾಸೋಹ: ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಬೆನಕನ ಅಮಾವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭಕ್ತ ಸಮೂಹ: ಬೆನಕನ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತು ಮಲೆ ಮಹದೇಶ್ವರರ ದರ್ಶನ ಪಡೆದರು. ಮಾದೇಶ್ವರನ ಬೆಟ್ಟದಲ್ಲಿ ಎತ್ತ ನೋಡಿದರೂ ಭಾರಿ ಭಕ್ತ ಸಮೂಹವೇ ನೆರದಿತ್ತು.
ಬೆನಕನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ವಿಶೇಷ ದಾಸೋಹ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ.ಎಇ ರಘು, ಕಾರ್ಯದರ್ಶಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ