ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭಾನುವಾರ ಶ್ರೀರಾಮನವಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಶ್ರೀರಾಮ, ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಅರವಂಟಿಕೆ ನಡೆಸಲಾಯಿತು.
ಮನೆಮನೆಗಳಲ್ಲೂ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪೂಜಾ ಕಾರ್ಯಕ್ರಮಗಳು ನಡೆದವು. ಇಲ್ಲಿನ ಅರಳುಮಲ್ಲಿಗೆ ಬಾಗಿಲು ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿಯ ಆಕೃತಿ ನಿರ್ಮಿಸಿ ತಿರುನಾಮ, ಶಂಖ-ಚಕ್ರಗಳನ್ನು ಬಿಡಿಸಲಾಗಿತ್ತು. ದೇವಾಲಯಕ್ಕೆ ನೂರಾರು ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದರು.ನೆಲದಾಂಜನೇಯಸ್ವಾಮಿ ದೇವಾಲಯದಲ್ಲೂ ಶ್ರೀರಾಮನವಮಿಯ ಸಂಭ್ರಮ ಮನೆಮಾಡಿತ್ತು. ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ರೋಜಿಪುರದ ಆಂಜನೇಯಸ್ವಾಮಿ ದೇವಾಲಯ, ರಂಗಪ್ಪ ವೃತ್ತದ ಬಾಲಾಂಜನೇಯ ದೇಗುಲ, ತೇರಿನಬೀದಿಯ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ, ರಾಮಣ್ಣನಬಾವಿ ಆಂಜನೇಯ ದೇವಾಲಯ, ನಾಗರಕೆರೆಯ ನಾರಾಯಣ ಮಂದಿರ, ಶಿವಪುರ ಬಾಗಿಲು ಆಂಜನೇಯ ದೇವಾಲಯ, ಕಿಲ್ಲೆ ವೇಣುಗೋಪಾಲ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಮಂದಿರಗಳಲ್ಲಿ ಶ್ರೀರಾಮನವಮಿಗೆ ವಿಶೇಷ ಪೂಜೆಗಳು ನೆರವೇರಿತು.
ಹಲವೆಡೆ ಅರವಂಟಿಕೆ:ಶ್ರೀರಾಮನವಮಿ ಪ್ರಯುಕ್ತ ವಿವಿಧೆಡೆ ಸಾರ್ವಜನಿಕ ಅರವಂಟಿಕೆಗಳನ್ನು ಏರ್ಪಡಿಸಿ, ಶ್ರೀರಾಮ ಪ್ರಭುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿತ್ತು. ನೂರಾರು ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ, ಪ್ರಸಾದ ವಿತರಿಸಲಾಯಿತು.ಕೃಷ್ಣರಾಜೇಂದ್ರ ಮಾರುಕಟ್ಟೆ, ಬಸ್‌ನಿಲ್ದಾಣ, ಕೊಂಗಾಡಿಯಪ್ಪ ಮುಖ್ಯರಸ್ತೆ, ತೇರಿನಬೀದಿ, ಶಾಂತಿನಗರ ವಿವಿಧೆಡೆ ಅರವಂಟಿಕೆಗಳು ನಡೆದವು.
ದೇವರ ರಾಜಬೀದಿ ಉತ್ಸವ:ಶ್ರೀರಾಮನವಮಿ ಅಂಗವಾಗಿ ಇಲ್ಲಿನ ಅರಳುಮಲ್ಲಿಗೆ ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ಶ್ರೀರಾಮ, ಲಕ್ಷ್ಮಣ, ಸೀತಾ ಸಮೇತ ಹನುಮಸ್ವಾಮಿಯ ರಾಜಬೀದಿ ಪಲ್ಲಕ್ಕಿ ಉತ್ಸವ ನೆರವೇರಿತು.
(ಒಂದು ಫೋಟೋವನ್ನು ಪ್ಯಾನಲ್ ಸಿಂಗಲ್‌ನಲ್ಲಿ ಬಳಸಿ)6ಕೆಡಿಬಿಪಿ1- ದೊಡ್ಡಬಳ್ಳಾಪುರದ ಅರಳುಮಲ್ಲಿಗೆ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷಾಲಂಕಾರ.
6ಕೆಡಿಬಿಪಿ2- ಭಕ್ತಾದಿಗಳಿಗೆ ಪಾನಕ, ಕೋಸಂಬರಿ ವಿತರಣೆ.6ಕೆಡಿಬಿಪಿ3- ಶಾಂತಿನಗರ ಹನುಮ ದೇಗುಲದಲ್ಲಿ ಬೆಣ್ಣೆ ಅಲಂಕಾರ.
6ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ಶ್ರೀರಾಮ, ಆಂಜನೇಯಸ್ವಾಮಿಗೆ ವಿಶೇಷಾಲಂಕಾರ.