ನಾಳೆ ನಟನದಲ್ಲಿ ಶ್ರೀಮನ್ಮಹೀಶೂರ ರತ್ನ ಸಿಂಹಾಸನ ಹೊಸ ನಾಟಕ ಪ್ರದರ್ಶನ

KannadaprabhaNewsNetwork | Published : Nov 30, 2024 12:48 AM

ಸಾರಾಂಶ

ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ 2024-25ನೇ ಸಾಲಿನ ರಂಗಭೂಮಿ ಡಿಫ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ಸಂಸ ವಿರಚಿತ ವಿಗಡ ವಿಕ್ರಮರಾಯ ಮತ್ತು ಮಂತ್ರಶಕ್ತಿ ನಾಟಕಗಳ ಸಂಕಲಿತ ರೂಪ ಶ್ರೀ ಮನ್ಮಹೀಶೂರ ರತ್ನ ಸಿಂಹಾಸನ ಎಂಬ ನಾಟಕವು ಡಿ.1ರ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ 2024-25ನೇ ಸಾಲಿನ ರಂಗಭೂಮಿ ಡಿಫ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ಸಂಸ ವಿರಚಿತ ವಿಗಡ ವಿಕ್ರಮರಾಯ ಮತ್ತು ಮಂತ್ರಶಕ್ತಿ ನಾಟಕಗಳ ಸಂಕಲಿತ ರೂಪ ಶ್ರೀ ಮನ್ಮಹೀಶೂರ ರತ್ನ ಸಿಂಹಾಸನ ಎಂಬ ನಾಟಕವು ಡಿ.1ರ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.

ಈ ನಾಟಕಕ್ಕೆ ನಟನ ರಂಗಶಾಲೆಯ ಪ್ರಾಂಶುಪಾಲ, ಯುವ ರಂಗ ನಿರ್ದೇಶಕ ಮೇಘ ಸಮೀರ ಅವರ ವಿನ್ಯಾಸ ಮತ್ತು ನಿರ್ದೇಶನ, ಚೇತನ್ ಸಿಂಗಾನಲ್ಲೂರು ಸಂಗೀತ, ದಿಶಾ ರಮೇಶ್ ಬೆಳಕು ಸಂಯೋಜಿಸಿದ್ದಾರೆ.

ಜಗತ್ತಿನ ನಾಟಕ ಸಾಹಿತ್ಯಕ್ಕೆ ಸಂಸ ನಾಮಾಂಕಿತ ಸಾಮಿ ವೆಂಕಟಾದ್ರಿ ಅಯ್ಯರ್ ಅವರ ಕೊಡುಗೆ ಅಪ್ರತಿಮವಾದದ್ದು. ಕನ್ನಡದಲ್ಲಿ ಐತಿಹಾಸಿಕ ನಾಟಕಗಳನ್ನು, ಅದರಲ್ಲೂ ಎಲ್ಲಾ ಕಾಲಕ್ಕೂ ಸಲ್ಲುವ ರಾಜಕೀಯ ಪ್ರಜ್ಞೆ, ಸಂಕೀರ್ಣ ಕಥಾ ವಸ್ತುವನ್ನು, ರಾಜತಾಂತ್ರಿಕ ವ್ಯವಸ್ಥೆಯ, ಪ್ರಭುತ್ವದ ಒಳಸುಳಿ, ಜಟಿಲತೆಗಳನ್ನು ಕನ್ನಡದ ವಿಶಿಷ್ಟ ಶೈಲಿಯಲ್ಲಿ ರಚಿಸಿದವರು. ಆದ ಕಾರಣದಿಂದಲೇ ಓದುಗರಿಗೆ, ನಿರ್ದೇಶಕರಿಗೆ, ನಟರಿಗೆ ಸವಾಲು ಎಸಗುವಂತಹವರು. ಕನ್ನಡದಲ್ಲಿ ಅಪರೂಪವೆನಿಸಿದ ನಾಟಕ ಚಕ್ರದ ರೀತಿಯಲ್ಲಿ ನಾಟಕಗಳನ್ನು ಬರೆದವರು ಸಂಸರು.

ಬೆಟ್ಟದ ಅರಸು, ವಿಗಡ ವಿಕ್ರಮರಾಯ, ವಿಜಯ ನಾರಸಿಂಹ ಮತ್ತು ಮಂತ್ರಶಕ್ತಿ.. ಈ ನಾಲ್ಕೂ ನಾಟಕಗಳು ರಣಧೀರ ಕಂಠೀರವ ನರಸರಾಜ ಒಡೆಯರ ಬದುಕು, ವ್ಯಕ್ತಿತ್ವ ಮತ್ತು ಆಡಳಿತದ ಚರಿತ್ರೆಯ ಆಧಾರದ ಮೇಲೆ ಸರಣಿಯ ರೀತಿ ರಚಿಸಿದ ನಾಟಕಗಳು. ಪ್ರಭುಶಕ್ತಿ, ಉತ್ಸಾಹಶಕ್ತಿ, ಮಂತ್ರಶಕ್ತಿ ಹೇಗೆ ಪ್ರಭುತ್ವ, ಅಧಿಕಾರ, ರಾಜಕಾರಣದಲ್ಲಿ ಕೆಲಸ ಮಾಡುತ್ತದೆ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ನಾಟಕಗಳು ಧ್ವನಿಸುತ್ತವೆ. ಇವುಗಳಲ್ಲಿ ವಿಗಡ ವಿಕ್ರಮರಾಯ ಮತ್ತು ಮಂತ್ರಶಕ್ತಿ ನಾಟಕಗಳನ್ನು ಸಂಕಲಿಸಿ ಮಾಡಿರುವ ರಂಗ ಪ್ರಯೋಗವೇ ರತ್ನ ಸಿಂಹಾಸನ.

ರಂಗಾಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 72595 37777, 94804 68327, 98455 95505 ಸಂಪರ್ಕಿಸಬಹುದು.

Share this article