ಕುಶಾಲನಗರ: ರಾಜ್ಯದಲ್ಲಿ 18ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಸುವ ಮೂಲಕ ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಕ್ರಮ ವಹಿಸಬೇಕು ಎಂದು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಸೂಚನೆ ನೀಡಿದ್ದಾರೆ.ಶಾಲಾ ಶಿಕ್ಷಣ ಇಲಾಖೆಯ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ-3 ರ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ನಡೆಸಿ ಪರೀಕ್ಷೆ ಕುರಿತು ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಶಾಲಾ ಶಿಕ್ಷಣ ಇಲಾಖೆಯು ವಿಶೇಷ ಕಾಳಜಿ ವಹಿಸಿದೆ. ಈ ಬಾರಿ ಕೊಡಗು ಜಿಲ್ಲೆಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ರಾಜ್ಯಮಟ್ಟದಲ್ಲಿ ಮೊದಲ ಎರಡನೇ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದರು.ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ- 1 ರಲ್ಲಿ ತಾಲೂಕಿನಲ್ಲಿ 12 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2481 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಎಸ್.ಎಸ್.ಶಿವಕುಮಾರ್ , ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಕೈಗೊಂಡಿರುವ ಅಂಕಿ- ಅಂಶಗಳ ಮಾಹಿತಿ ನೀಡಿದರು. ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಹ್ಯಾರಿ ಮೋರಸ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಪಿ.ನವೀನ್ ಕುಮಾರ್, ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರ ಉಪ ಪ್ರಾಂಶುಪಾಲ ಎ.ಸಿ.ಮಂಜುನಾಥ್, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಇಂದಿರಾ, ಕಾರ್ಯದರ್ಶಿ ಸೋಮಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಯಶವಂತ್ ಮತ್ತಿತರರಿದ್ದರು.