- ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿಗಾಗಿ ಹೋರಾಟ: ಮಾಜಿ ಸಚಿವ ರಮೇಶ ಜಾರಕಿಹೊಳಿ - - -
ವಾಲ್ಮೀಕಿ ನಾಯಕ (ಎಸ್‌ಟಿ) ಸಮುದಾಯಕ್ಕೆ ಸಿಗಬೇಕಾಗಿದ್ದ ಶೇ.7 ಮೀಸಲಾತಿ ಕಸಿದು, ಶೇ.3ಕ್ಕೆ ಇಳಿಸಿದ ಕಾಂಗ್ರೆಸ್ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್‌ಟಿ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಖಂಡಿಸಿ, ಶೇ.7ಕ್ಕೆ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಶೀಘ್ರವೇ ಬೀದರ್‌ನಿಂದ ಚಾಮರಾಜ ನಗರವರೆಗೆ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿನ ವಿನೋಬ ನಗರದ ದಾವಣಗೆರೆ- ಹರಿಹರ ಅರ್ಬನ್ ಕೋ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಸಂವಿಧಾನ ಬದ್ಧ ಶೇ.7ರ ಎಸ್‌ಟಿ ಮೀಸಲಾತಿ ಜಾರಿ ಆಗಲೇಬೇಕು ಎಂಬ ಕುರಿತು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬೀದರ್‌ನಿಂದ ಚಾಮರಾಜ ನಗರದವರೆಗೆ ಹೋರಾಟವನ್ನು ನಡೆಸುವ ಮೂಲಕ ಎಸ್‌ಟಿ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಪಡೆಯುತ್ತೇವೆ ಎಂದರು.ನಮ್ಮ ಸಮುದಾಯದ ನಾಯಕರೆಲ್ಲಾ ಒಂದೇ ವೇದಿಕೆಗೆ ಬಂದು, ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ನಮ್ಮ ಹೋರಾಟ ಕೇವಲ ಶಾಸಕನಾಗುವುದಕ್ಕೆ ಮಾತ್ರ ಸೀಮಿತವಾಗಬಾರದು. ಸೋತಾಗ ಒಂದು ರೀತಿ, ಗೆದ್ದಾಗ ಮತ್ತೊಂದು ರೀತಿ ಆಗಬಾರದು. ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ನಾನು ಸೇರಿದಂತೆ ಯಾರಿಂದಲೇ ತಪ್ಪಾಗಿದ್ರೂ ನಮ್ಮ ತಪ್ಪಿನಿಂದ ಸಮಾಜಕ್ಕೆ ಅನ್ಯಾಯ ಆಗಬಾರದು. ಸಮಾಜದ ಹೋರಾಟಕ್ಕೆ ನಾವು ಸದಾ ಸಿದ್ಧವಾಗಿರಬೇಕು ಎಂದು ಅವರು ತಿಳಿಸಿದರು.
ಹೋರಾಟಕ್ಕೆ ಸಜ್ಜಾಗಬೇಕು:
ಮಾಜಿ ಸಚಿವ ರಾಜು ಗೌಡ ಮಾತನಾಡಿ, ನಾವೆಲ್ಲರೂ ಹುಟ್ಟು ಹೋರಾಟಗಾರರಾಗಿದ್ದು, ಹುಟ್ಟು ನಾಯಕರು. ಹುಟ್ಟುತ್ತಲೇ ನಾಯಕರಾಗಿದ್ದಕ್ಕೆ ಇಂದು ನಮಗೆ ಇಂತಹ ಪರಿಸ್ಥಿತಿ ಬಂದಿದೆ. ಭಕ್ತ ಕಣ್ಣಪ್ಪ ಶಿವನಿಗೆ ಕಣ್ಣನ್ನು ಕೊಟ್ಟವನು. ಏಕಲವ್ಯ ಗುರು ಭಕ್ತಿಯಾಗಿ ತನ್ನ ಹೆಬ್ಬರಳನ್ನೇ ಕತ್ತರಿಸಿ ಕೊಟ್ಟವನು. ಅಂದಿನಿಂದ ಇಂದಿನವರೆಗೂ ನಮ್ಮ ಸಮುದಾಯದವರು ಎಲ್ಲ ತ್ಯಾಗ ಮಾಡಿಕೊಂಡೇ ಬಂದಿದ್ದಾರೆಯೇ ಹೊರತು, ಯಾರಿಗೂ ಏನನ್ನೂ ಕೇಳಿಲ್ಲ. ಹಿಂದಿನ ನಮ್ಮ ಸರ್ಕಾರದಲ್ಲಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ. ರಮೇಶ ಜಾರಕಿಹೊಳಿ ಸಚಿವ ಸ್ಥಾನವನ್ನೂ ಕಿತ್ತುಕೊಳ್ಳಲಾಯಿತು. ಆದರೂ ಯಾರೂ ಅದನ್ನು ಪ್ರಶ್ನೆಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
- - -
ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಸಂವಿಧಾನ ಬದ್ಧ ಶೇ.7ರ ಎಸ್‌ಟಿ ಮೀಸಲಾತಿ ಜಾರಿ ಆಗಲೇಬೇಕು ಎಂಬ ಕುರಿತು ನಡೆದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಬಿ.ಶ್ರೀರಾಮುಲು, ರಮೇಶ ಜಾರಕಿಹೊಳಿ, ರಾಜು ಗೌಡ ಇನ್ನಿತರ ಗಣ್ಯರು ಉದ್ಘಾಟಿಸಿದರು.