ಮೂರ್ತಿ ಪ್ರಾಣಪ್ರತಿಷ್ಠಾಪನೆ: ತಿರ್ಲಾಪುರ ಗ್ರಾಮದಾದ್ಯಂತ ಸಂಭ್ರಮ

KannadaprabhaNewsNetwork | Published : May 4, 2025 1:35 AM

ಸಾರಾಂಶ

ಗ್ರಾಮದ ಚೌತ ಮನೆಯಿಂದ ಹೊರಟ ದೇವಿ ಮೂರ್ತಿಗಳ ಮೆರವಣಿಗೆಯಲ್ಲಿ ವಿಶೇಷ ದಿವಟಗಿ ಸೇವೆ, ಕುದರಿಕಾರರ ಸೇವೆ, ಪೂರ್ಣ ಕುಂಭ ಮೇಳ, ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಜೋಗಿತಿಯರ ನೃತ್ಯ ಗಮನಸೆಳೆಯಿತು.

ನವಲಗುಂದ: ತಾಲೂಕಿನ ತಿರ್ಲಾಪುರ ಗ್ರಾಮದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಮೂರ್ತಿಯ ಪುರ ಪ್ರವೇಶದ ನಂತರ ಶನಿವಾರ ಎರಡನೇ ದಿನವೂ ಭವ್ಯ ಮೆರವಣಿಗೆ ನಡೆಯಿತು.

ಗ್ರಾಮದ ಚೌತ ಮನೆಯಿಂದ ಹೊರಟ ದೇವಿ ಮೂರ್ತಿಗಳ ಮೆರವಣಿಗೆಯಲ್ಲಿ ವಿಶೇಷ ದಿವಟಗಿ ಸೇವೆ, ಕುದರಿಕಾರರ ಸೇವೆ, ಪೂರ್ಣ ಕುಂಭ ಮೇಳ, ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಜೋಗಿತಿಯರ ನೃತ್ಯ ಗಮನಸೆಳೆಯಿತು. ಭಂಡಾರದ ಹೊನ್ನಾಟದೊಂದಿಗೆ ಭವ್ಯ ಮೆರವಣಿಗೆ ನಡೆಸಿ ಪುನಃ ಚೌತ ಮನೆ ತಲುಪಿ ಸಮಾರೋಪಗೊಂಡಿತು.

ಗ್ರಾಮದ ಪ್ರತಿಯೊಂದು ಮಹಿಳೆಯರೆಲ್ಲರೂ ಸೇರಿ ದೇವತೆಗಳಿಗೆ ಇಪ್ಪತ್ತು ಗ್ರಾಂ ಬಂಗಾರದ ಟಿಕೆ ಸರವನ್ನು ಸಮರ್ಪಿಸಿದ್ದಾರೆ. ಮೇ 4 ಸೋಮವಾರ ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ಶ್ರೀ ಶಿವಾನಂದ ಭಜನಾ ಸಂಘದ ಮಾಸ್ತರ ರಮೇಸ ಮಲ್ಲೇದಿ ಹಾಗೂ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ಶ್ರೀ ಬಸವೇಶ್ವರ ಭಜನಾ ಸಂಘದ ಸಂತೋಷ ಮಾದನಬಾವಿ ಸಂಘಡಿಗರಿಂದ ತತ್ವ ಭಜನಾ ಕಾರ್ಯಕ್ರಮ ಜರುಗಲಿದೆ.

ಗ್ರಾಮದ ಹಿರಿಯರಾದ ಅಂದಾನಯ್ಯ ಹಿರೇಮಠ, ಆರ್.ಎಚ್. ಈರಡ್ಡಿ, ಗ್ರಾಪಂ ಅಧ್ಯಕ್ಷ ಸಂಜೀವರೆಡ್ಡಿ ನವಲಗುಂದ, ಉಪಾಧ್ಯಕ್ಷೆ ನೀಲವ್ವ ಭೂಮಣ್ಣವರ ಸದಸ್ಯರಾದ ಮಹೇಶ ಭಕ್ಕಣ್ಣವರ, ಭರತ ತಳವಾರ, ಮಾಜಿ ಅಧ್ಯಕ್ಷ ಬಸವರಾಜ್ ಆಕಳದ, ಶಂಕ್ರಯ್ಯ ಹಿರೇಮಠ, ವಿಜಯ ಕಾರಿಕಾಯಿ, ಸಿದ್ದಪ್ಪ ಗಡೆನ್ನವರ, ಮಲ್ಲಿಕಾರ್ಜುನ ಭೂಮಣ್ಣವರ, ಸಿದ್ದಲಿಂಗಯ್ಯ ಲೋಕಾಪುರಮಠ, ಬಸಣ್ಣ ಅಣ್ಣಿಗೇರಿ, ಗುರುಸಿದ್ದಪ್ಪ ಮೆಣಸಿನಕಾಯಿ, ಬಸವರಾಜ್ ಬೆಣ್ಣಿ, ಲಿಂಗರಾಜ್ ಕಮತ, ಮಲ್ಲಪ್ಪ ತಟ್ಟಿಮನಿ, ಸೇರಿದಂತೆ ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳು, ಮುಖಂಡರು, ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಗ್ರಾಮವನ್ನು ತಳಿರು ತೋರಣಗಳಿಂದ ಸೃಂಗರಿಸಲಾಗಿದೆ. ಬಹುತೇಕ ಹೆಣ್ಣುಮಕ್ಕಳು, ಸೊಸೆಯಂದಿರು ದೇವಿಯ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದ್ದು ವಿಶೇಷ ಎಂದು ಗ್ರಾಮದ ಮುಖಂಡ ಯಶವಂತಗೌಡ ಪಾಟೀಲ ತಿಳಿಸಿದರು.

Share this article