- ಶಿವಮೊಗ್ಗ-ದಾವಣಗೆರೆ ಅವಳಿ ಜಿಲ್ಲೆಗಳಲ್ಲಿ ಅಕ್ರಮ ದಂಧೆ ತಡೆಗಟ್ಟದ ಜಿಲ್ಲಾಡಳಿತ, ಗಣಿ ಅಧಿಕಾರಿಗಳು: ಆರೋಪ - - -
ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ಗಡಿಯ ತುಂಗಭದ್ರಾ ನದಿಯಲ್ಲಿ 3 ವರ್ಷಗಳಿಂದಲೂ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕುವಂತೆ ಉಭಯ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನಿಂಬೆಗುಂದಿ, ದಾವಣಗೆರೆ ಜಿಲ್ಲೆಯ ಮಳಲಿ ಗ್ರಾಮಗಳ ಮಧ್ಯೆ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೆ, ಉಭಯ ಜಿಲ್ಲಾಡಳಿತ, ಗಣಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದರು.ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಮೆಂಟ್ ಪೈಪ್‌ಗಳ ಹಾಕಿ, ಕಲ್ಲು, ಮಣ್ಣನ್ನು ಸುರಿದು ತಾತ್ಕಾಲಿಕ ಸೇತುವೆಯನ್ನೇ ನಿರ್ಮಿಸಿ ಟ್ರ್ಯಾಕ್ಟರ್‌ಗಳಲ್ಲಿ ನದಿಯ ಉತ್ಕೃಷ್ಟ ಮರಳನ್ನು ಲೂಟಿ ಮಾಡುತ್ತಿದ್ದಾರೆ. ಭಾನುವಾರ ನೆಪಮಾತ್ರಕ್ಕೆ, ತೋರಿಕೆಗೆಂಬಂತೆ ಅಧಿಕಾರಿಗಳು ನದಿ ಬಳಿಗೆ ದಾಳಿ ಮಾಡಿದ್ದು ಬಿಟ್ಟರೆ, ಅಕ್ರಮ ಮರಳುಗಾರಿಕೆ ತಡೆಯುವ ಯಾವುದೇ ಕಠಿಣ ಕ್ರಮ ಉಭಯ ಜಿಲ್ಲಾಡಳಿತಗಳಿಂದ ಜಾರಿಯಾಗಿಲ್ಲ ಎಂದು ಕಿಡಿಕಾರಿದರು.
ಸುಮಾರು 25ಕ್ಕೂ ತೆಪ್ಪಗಳ ಬಳಸಿ ಮರಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಜಿಲ್ಲೆಯವರು ಆ ಜಿಲ್ಲೆಯ ಮೇಲೆ, ಆ ಜಿಲ್ಲೆಯವರು ಈ ಜಿಲ್ಲೆಯ ಪ್ರದೇಶವೆಂದು ಹೇಳಿಕೊಂಡು, ಪ್ರಕೃತಿ ಸಂಪತ್ತನ್ನು ಹಾಡಹಗಲೇ ಕೊಳ್ಳೆ ಹೊಡೆಯವವರಿಗೆ ಇಲಾಖೆಗಳು ಬಿಟ್ಟುಕೊಟ್ಟಂತಿದೆ. ಅಧಿಕಾರಿಗಳ ವರ್ತನೆ ನೋಡಿದರೆ ಇಂತಹ ದಂಧೆಯಲ್ಲಿ ಶಾಮೀಲು ಆಗಿದ್ದಾರೆ ಎನಿಸುತ್ತದೆ. ಉಭಯ ಜಿಲ್ಲೆಗಳ ಡಿ.ಸಿ.ಗಳು ಈ ಬಗ್ಗೆ ಸಮಗ್ರ ತನಿಖೆಗೆ ಕ್ರಮ ಕೈಗೊಳ್ಳಬೇಕು. ಉದಾಸೀನ ಮಾಡಿದರೆ, ತೀವ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.ಹೊನ್ನಾಳಿ ತಾಲೂಕಿನ ಬಿದರಗಡ್ಡೆಯಲ್ಲಿ ಉತ್ಕೃಷ್ಟ, ಒಳ್ಳೆಯ ಮರಳು ಸಿಗುತ್ತದೆ. ಇಂದಿಗೂ ಅಲ್ಲಿ ಟೆಂಡರ್ ಮಾಡಿಲ್ಲ. ಇಂದಿಗೂ ಬ್ಲಾಕ್ ಹರಾಜು ಮಾಡದ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆ ಅಧಿಕಾರಿಗೂ ಹೇಳಿದ್ದೇವೆ. ಯಾಕೆ ಹರಾಜು ಮಾಡುತ್ತಿಲ್ಲ? ಬಿದರಗಡ್ಡೆ ಬ್ಲಾಕ್ ಆಕ್ಷನ್ ಮಾಡಿ. ಸರ್ಕಾರಿ ಕೆಲಸದ ನೆಪ ಮಾಡಿಕೊಂಡು ಲ್ಯಾಂಡ್ ಆರ್ಮಿಗೆ ಕೊಟ್ಟಿದ್ದೇವೆನ್ನುತ್ತಾರೆ. ಆದರೆ, ಲ್ಯಾಂಡ್ ಆರ್ಮಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸವೇ ಇಲ್ಲ. ಲ್ಯಾಂಡ್ ಆರ್ಮಿಗೆ ಒಂದು ಬ್ಲಾಕ್ ಇದ್ದರೂ ಉರುಳಹಳ್ಳಿ ಬ್ಲಾಕ್ ಲ್ಯಾಂಡ್ ಆರ್ಮಿಗೆ ನೀಡಿದ್ದಾರೆ. ಬಿದರಗಡ್ಡೆ ಹೆಸರಷ್ಟೇ ಲ್ಯಾಂಡ್ ಆರ್ಮಿಯದ್ದು ಎಂದು ಅವರು ಟೀಕಿಸಿದರು.
ಮರಳು ಬ್ಲಾಕ್‌ಗಳನ್ನು ಹರಾಜು ಹಾಕುವ ಕೆಲಸ ಆಡಳಿತ ಯಂತ್ರ ಮೊದಲು ಮಾಡಲಿ. ಬಿದರಗಡ್ಡೆ ಗ್ರಾಮಸ್ಥರಿಗೆ ಮರಳುಗಾರಿಕೆ ಮಾಡಲು ಬಿಡಿ. ಬೇರೆ ಯಾರಿಗೋ ಮಾಡಲು ನಾವು ಬಿಡಲ್ಲ. ಕಾಂಗ್ರೆಸ್ಸಿನ ಮುಖಂಡರೊಂದಿಗೆ ಶಾಮೀಲಾಗಿ ಜನವರಿಯಿಂದ ಮರಳು ಎತ್ತಲು ಕೆಲವರು ಮುಂದಾಗಿದ್ದು, ನಾನು ಅದಕ್ಕೆಲ್ಲಾ ಅವಕಾಶ ಕೊಡುವುದಿಲ್ಲ. ದಾಖಲೆಗಳ ಸಮೇತ ಬಿಡುಗಡೆ ಮಾಡಿ, ಹೋರಾಟ ಮಾಡುವೆ. ಈ ವಿಚಾರವನ್ನು ಅಧಿಕಾರಿಗಳಿಗೂ ಹೇಳಿದ್ದೇನೆ. ಮರಳುಗಾರಿಕೆಗೆ ಅನುಮತಿ ನೀಡುವುದಿದ್ದರೆ ಅಲ್ಲಿನ ಗ್ರಾಮಸ್ಥರಿಗೆ ಬಿಟ್ಟು ಕೊಡಲಿ. ಆದರೆ, ಅಕ್ರಮ ಮರಳು ದಂಧೆಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಛರಿಸಿದರು.ಬಿಜೆಪಿ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಜಿ.ದಯಾನಂದ, ಚೇತನಕುಮಾರ, ಅಜಯ್, ರವಿಗೌಡ್ರು, ಮಂಜು ಪೈಲ್ವಾನ್, ತಿಪ್ಪೇಶ, ಜಯಣ್ಣ ಇತರರು ಇದ್ದರು. - - -(ಕೋಟ್)
ಬಿದರಗಡ್ಡೆ, ಉರುಳಹಳ್ಳಿಯಲ್ಲಿ ಮರಳು ಎತ್ತಿದಾಗ ಕಾಂಗ್ರೆಸ್‌ನ ಯಾರು ಮರಳು ದಂಧೆಗೆ ಮುಂದಾಗಿದ್ದಾರೆಂದು ಶೀಘ್ರವೇ ಬಹಿರಂಗಪಡಿಸುವೆ. ಲ್ಯಾಂಡ್ ಆರ್ಮಿ ಹೆಸರಲ್ಲಿ ಮರಳು ದಂಧೆಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರಿಗೂ ಕರೆ ಮಾಡಿ, ವಿಚಾರ ತಿಳಿಸಿದ್ದೇನೆ. ಬಿದರಗಡ್ಡೆ ಗ್ರಾಮಸ್ಥರಿಗೆ ಮರಳುಗಾರಿಕೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದೇನೆ.- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
- - --8ಕೆಡಿವಿಜಿ4: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -8ಕೆಡಿವಿಜಿ9: ತುಂಗಭದ್ರಾ ನದಿಗೆ ಅಡ್ಡಲಾಗಿ ಅಕ್ರಮ ಸೇತುವೆ ನಿರ್ಮಿಸಿರುವುದು.. -8ಕೆಡಿವಿಜಿ10, 11, 12, 13: