ಕನ್ನಡಪ್ರಭವಾರ್ತೆ ತಿಪಟೂರು
ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎರಡು ಕೋಟಿ ರುಗಳಷ್ಟು ಹಣ ನಮ್ಮಲ್ಲಿ ಇದೆ. ನೀರಿನ ಸಮಸ್ಯೆ ಆದರೆ ಈ ಹಣದಲ್ಲಿ ತಕ್ಷಣವೇ ಬೋರ್‌ವೆಲ್ ಕೊರೆದು ಜನರಿಗೆ ನೀರು ಕೊಡುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು.
ಉಪವಿಭಾಗ ಮಟ್ಟದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ೨೨ಸಾವಿರ ಹಕ್ಕುಪತ್ರ ವಿತರಿಸುವ ಮೂಲಕ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ೭೫ಸಾವಿರ ಪವತಿ ಖಾತೆಗಳನ್ನು ಈಗಾಗಲೇ ಮಾಡಲಾಗಿದೆ. ಈ ವಾರದ ಗುರಿಯನ್ನು ಮುಟ್ಟಲು ಸಂಬಂಧಿಸಿದ ವಿಎ ಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿಎಗಳು ಕನಿಷ್ಟಪಕ್ಷ ದಿನಕ್ಕೆ ಒಮ್ಮೆಯಾಗದೂ ತಮಗೆ ಸಂಬಂಧಿಸಿದ ಗ್ರಾಮಗಳಿಗೆ ಹೋಗಿ ಅಲ್ಲಿ ಜನರ ಸಮಸ್ಯೆಗಳನ್ನು ಕೇಳಬೇಕು, ಯಾವ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಲು ತಿಳಿಸಿದರು.ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ಈಗಾಗಲೆ ಟೆಂಡರ್ ಕರೆದು ಸಾಕಷ್ಟು ಸಮಯವಾಗಿದ್ದರೂ ಸಂಬಂದಿಸಿದ ಕಾಮಗಾರಿಗಳನ್ನು ಪ್ರಾರಂಭಿಸಿಲ್ಲದಿರುವುದು ತಿಳಿದುಬಂದಿದ್ದು, ಸಮಯ ವ್ಯರ್ಥ ಮಾಡದೆ ಕೂಡಲೇ ಪ್ರಾರಂಭಿಸಿ ಮುಗಿಸಬೇಕು. ತಾಲೂಕಿನ ಎಲ್ಲ ಸಮಸ್ಯೆಗಳು ಹಾಗೂ ದೂರುಗಳ ಬಗ್ಗೆ ಪ್ರತಿವಾರ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.ಶಾಸಕ ಕೆ.ಷಡಕ್ಷರಿ ಮಾತನಾಡಿ ಬೇಸಿಗೆ ಹೆಚ್ಚಾಗಿದ್ದು ಕುಡಿಯುವ ನೀರಿನ ಸಮಸ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಅದನ್ನು ಎದುರಿಸಲು ತಾಲೂಕು ಆಡಳಿತ ಸರ್ವಸಿದ್ದತೆ ಮಾಡಿಕೊಂಡಿದ್ದು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತಾಲೂಕಿನ ಕಿಬ್ಬನಹಳ್ಳಿಯಲ್ಲಿ ಪ್ರಾರಂಭವಾಗಬೇಕಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೆಲಸದ ಪ್ರಾರಂಭ ತಾಂತ್ರಿಕ ತೊಂದರೆಯಿಂದಾಗಿ ಸ್ವಲ್ಪ ಮುಂದಕ್ಕೆ ಹೋಗಿದೆ. ಸಂಬಂದಪಟ್ಟ ಸಚಿವರೊಂದಿಗೆ ಈಗಾಗಲೇ ಇದರ ಬಗ್ಗೆ ಮಾತನಾಡಿದ್ದು, ಆಸ್ಪತ್ರೆ ಕೆಲಸಕ್ಕೆ ಎಲ್ಲ ನೆರವನ್ನೂ ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ. ಕ್ರೀಡಾ ವಸತಿ ನಿಲಯ ಪ್ರಾರಂಭಿಸಲೂ ಸಿದ್ದತೆ ನಡೆಸಲಾಗಿದೆ ಎಂದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ತಹಸೀಲ್ದಾರ್ ಮೋಹನ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಸುದರ್ಶನ್, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಹಾಗೂ ಎಲ್ಲ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.ಬಾಕ್ಸ್ : ಗುಟ್ಟಾಗಿ ಸಭೆ ನಡೆಸಿದ ಜಿಲ್ಲಾಧಿಕಾರಿ ನಡೆಗೆ ಆಕ್ರೋಶ ಜಿಲ್ಲಾಧಿಕಾರಿಗಳು ತಿಪಟೂರು ಕೇಂದ್ರಸ್ಥಾನಕ್ಕೆ ಆಗಮಿಸುವ ಬಗ್ಗೆಯಾಗಲಿ ಅಥವಾ ತಾಲೂಕು ಪ್ರಗತಿ ಪರಿಶೀಲನಾ ಸಭೆ, ಉಪವಿಭಾಗದ ಕಂದಾಯ ಸಭೆ ನಡೆಸುವ ಬಗ್ಗೆಯಾಗಲಿ ಪರ್ತಕರ್ತರು ಸಭೆಯ ಸುದ್ದಿ ಮಾಡಲು ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಸಾರ್ವಜನಿಕರಿಗೂ ಯಾವ ಮಾಹಿತಿ ನೀಡದಿರುವ ತಾಲೂಕು ಆಡಳಿತದ ವಿರುದ್ಧ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ೧೫ದಿನಗಳ ಹಿಂದೆ ಇಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳ ಪ್ರಮುಖ ಜನಸಂಪರ್ಕ ಸಭೆಗೂ ಜಿಲ್ಲಾಧಿಕಾರಿಗಳು ಗೈರು ಹಾಜರಾಗುವ ಮೂಲಕ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದ್ದು ಈ ಬಾರಿಯೂ ಜಿಲ್ಲಾಧಿಕಾರಿಗಳು ಗುಟ್ಟಾಗಿ ಬಂದು ತಾಲೂಕು ಮಟ್ಟದ ಅಧಿಕಾರಿಗಳು ಅವರಿಗೆ ಬೇಕಾದಂತೆ ನೀಡುವ ಮಾಹಿತಿಗಳನ್ನು ಕೇಳಿಕೊಂಡು ಹೋಗಿದ್ದರಿಂದ ತಾಲೂಕಿನ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳು, ವಿದ್ಯುತ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ತಾಲೂಕು ಪಂಚಾಯತ್‌ನ ವಿವಿಧ ಇಲಾಖೆಗಳಲ್ಲಿ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆಯುವ ಪರ್ತಕರ್ತರು ಹಾಗೂ ದೂರು ನೀಡುವ ಸಾರ್ವಜನಿಕರಿಗೆ ಸಮಯ ನೀಡದಂತೆ ಗುಟ್ಟಾಗಿ ಸಭೆ ನಡೆಸಿರುವುದು ಯಾಕೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.