ಒಕ್ಕೂಟಕ್ಕೆ ಕಳಪೆ ಹಾಲು ಪೂರೈಕೆ ಮಾಡಿದ್ರೆ ಕಠಿಣ ಕ್ರಮ: ಎಂ.ಕೆ.ಹರೀಶ್ ಬಾಬು

KannadaprabhaNewsNetwork |  
Published : Aug 20, 2026, 01:45 AM IST
19ಕೆಎಂಎನ್ ಡಿ21 | Kannada Prabha

ಸಾರಾಂಶ

ಕೊಬ್ಬಿನಾಂಶ ಇಲ್ಲದ ಹಾಲನ್ನು ಸಂಘಗಳಿಗೆ ಪೂರೈಕೆ ಮಾಡುವ ರೈತರಿಗೆ ಸರ್ಕಾರದಿಂದ ಬರುವ 5 ರು. ಪ್ರೋತ್ಸಾಹ ಧನದ ಜೊತೆಗೆ ಒಕ್ಕೂಟದ ಸೌಲಭ್ಯಗಳಿಗೆ ಕಡಿವಾಣ ಹಾಕಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿದಿನ ನಾಲ್ಕರಿಂದ ಐದು ಲಕ್ಷ ಲೀಟರ್ ಮಾರಾಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಒಕ್ಕೂಟಕ್ಕೆ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ರೈತರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಅಧ್ಯಕ್ಷ ಎಂ.ಕೆ.ಹರೀಶ್ ಬಾಬು ಬುಧವಾರ ಎಚ್ಚರಿಕೆ ನೀಡಿದರು.

ಪಟ್ಟಣದ ಚನ್ನೇಗೌಡನದೊಡ್ಡಿ ಡೇರಿ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿ ಕೆಲ ಸಂಘಗಳು ಉತ್ಪಾದಕರೊಂದಿಗೆ ಶಾಮೀಲಾಗಿ ಒಕ್ಕೂಟಕ್ಕೆ ಕಳಪೆ ಹಾಲು ಪೂರೈಸಲಾಗುತ್ತಿತ್ತು. ಇದರ ಪತ್ತೆಗಾಗಿ ಒಕ್ಕೂಟ ಅಧಿಕಾರಿಗಳ ವಿಶೇಷ ತಂಡ ತಾಂತ್ರಿಕ ನೆರವು ಪಡೆದು ಪರಿಶೀಲನೆ ನಡೆಸಿದಾಗ ಕಳಪೆ ಹಾಲು ಪೂರೈಕೆ ಬೆಳಕಿಗೆ ಬಂದಿದೆ ಎಂದರು.

ಕೊಬ್ಬಿನಾಂಶ ಇಲ್ಲದ ಹಾಲನ್ನು ಸಂಘಗಳಿಗೆ ಪೂರೈಕೆ ಮಾಡುವ ರೈತರಿಗೆ ಸರ್ಕಾರದಿಂದ ಬರುವ 5 ರು. ಪ್ರೋತ್ಸಾಹ ಧನದ ಜೊತೆಗೆ ಒಕ್ಕೂಟದ ಸೌಲಭ್ಯಗಳಿಗೆ ಕಡಿವಾಣ ಹಾಕಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿದಿನ ನಾಲ್ಕರಿಂದ ಐದು ಲಕ್ಷ ಲೀಟರ್ ಮಾರಾಟವಾಗುತ್ತಿದೆ. 7 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ತಯಾರಿಸಲು ಬಳಸಿದ ನಂತರಉಳಿದ ಹಾಲನ್ನು ಹಾಲಿನ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದ 16 ಹಾಲು ಒಕ್ಕೂಟಗಳ ಪೈಕಿ ಅತಿ ಹೆಚ್ಚು ಹಾಲು ಸಂಗ್ರಹ ಮಾಡುವ ಒಕ್ಕೂಟದ ಪೈಕಿಮಂಡ್ಯ ಒಕ್ಕೂಟ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಐಸ್ ಕ್ರಿಮ್ , ಮಿನರಲ್ ನೀರು ತಯಾರಿಕಾ ಕೇಂದ್ರ ಸ್ಥಾಪನೆ:

ಕನ್ನಡಪ್ರಭದೊಂದಿಗೆ ಮಾತನಾಡಿದ ಹರೀಶ್ ಬಾಬು, ಜಿಲ್ಲಾ ಹಾಲು ಒಕ್ಕೂಟದಲ್ಲಿ ಶೀಘ್ರ ಹಾಲಿನ ಪುಡಿ ಪರಿವರ್ತನಾ ಘಟಕ, ಐಸ್ ಕ್ರೀಮ್ ಮತ್ತು ಮಿನರಲ್ ನೀರು ತಯಾರಿಕಾ ಕೇಂದ್ರವನ್ನು ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಒಕ್ಕೂಟದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಲು ಬೇರೆ ಕಡೆಗೆ ಸಾಗಿಸುವ ಸಂದರ್ಭದಲ್ಲಿ ಸಾಗಾಣಿಕೆ ವೆಚ್ಚ ಸೇರಿದಂತೆ ಒಕ್ಕೂಟಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಒಕ್ಕೂಟದಲ್ಲೇ 30 ಸಾವಿರ ಟನ್ ಸಾಮರ್ಥದ ಹಾಲಿನ ಪುಡಿ ಘಟಕ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಹಾಲು ಒಕ್ಕೂಟದಲ್ಲೇ ಐಸ್ ಕ್ರೀಮ್ ತಯಾರಿಕೆ ಮತ್ತು ಮಿನರಲ್ ವಾಟರ್ ಘಟಕ ಸಹ ತೆರೆಯಲು ಆಡಳಿತದ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಕ್ಕೂಟದ ಅಭಿವೃದ್ಧಿಗಾಗಿ ಕೈಗೊಂಡಿರುವ ಈಯೋಜನೆಗಳ ಬಗ್ಗೆ ಈಗಾಗಲೇ ರಾಜ್ಯ ಹಾಲು ಮಾರಾಟ ಮಹಾಮಂಡಲಿ ಕಾರ್ಯಕಾರಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆಗಳ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಡೇರಿ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಹರೀಶ್ ಹೆಗಡೆ, ಮಾರ್ಗ ವಿಸ್ತರಣಾಧಿಕಾರಿ ಅಪಶಾದ ಪಾಷಾ, ಸಂಘದ ಉಪಾಧ್ಯಕ್ಷ ಶಂಕರಾಚಾರಿ, ನಿರ್ದೇಶಕರಾದ ಸಿ.ಎಸ್.ಪ್ರಕಾಶ್, ಶಿವರಾಜು, ಶಿವಣ್ಣ, ಸಿ ರಾಜಣ್ಣ, ಚೆನ್ನಪ್ಪ, ಕವಿತಾ, ರಾಜೇಶ್ವರಿ, ಕುಮಾರ್, ಸಿಇಒ ನಾಗಣ್ಣ, ಹಾಲು ಪರೀಕ್ಷೆಕಿ ಎನ್.ಕಾವ್ಯ ಮತ್ತು ಸಹಾಯಕ ಪರೀಕ್ಷಿತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಪುಸ್ತಕ ಉತ್ತಮ ಗೆಳೆಯನಿದ್ದಂತೆ: ನಾ.ಸು.ನಾಗೇಶ್‌
ಕನಗನಮರಡಿ ಡೇರಿ ಅಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ