ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ 127 ಪೋಕ್ಸೋ ಪ್ರಕರಣಗಳು ದಾಖಲಾದರೂ ಒಬ್ಬರಿಗೂ ಶಿಕ್ಷೆಯಾಗದಿರುವುದು ಬೇಸರದ ಸಂಗತಿ. ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಕೂಲಂಕುಷವಾಗಿ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಹೇಳಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ಘಟಕ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಬೇಟಿ ಬಾಚಾವೋ ಬೇಟಿ ಪಡಾವೋ, ಲಿಂಗ ತಾರತಮ್ಯ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಪೋಕ್ಸೋ ಕಾಯ್ದೆ 2012, ವಿಶೇಷ ದತ್ತು ಪ್ರಕ್ರಿಯೇ ಮತ್ತು ಮಕ್ಕಳ ನ್ಯಾಯ ಕಾಯ್ದೆ 2015ರ ಕುರಿತು ಪೊಲೀಸ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಠಾಣೆಯು ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲು ತೆರೆದಮನೆ ಕಾರ್ಯಕ್ರಮ, ಮಕ್ಕಳ ರಕ್ಷಣಾ ಪೊಲೀಸ್ ಘಟಕ, ಮಕ್ಕಳ ಸಹಾಯವಾಣಿ ಸೇರಿ ವಿವಿಧ ಕಾರ್ಯಕ್ರಮ ಏರ್ಪಡಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ಪೊಲೀಸ್ ಇಲಾಖೆಯ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ 4 ವರ್ಷಗಳಲ್ಲಿ 18 ವರ್ಷದೊಳಗಿನ 80 ಸಾವಿರ ಮಕ್ಕಳು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣಗಳು ದಾಖಲಿಸಲಾಗಿದೆ ಎಂದ ಅವರು, ಅಧಿಕಾರಿಗಳು ಕಾರ್ಯಾಗಾರದ ಸದುಪಯೋಗ ಪಡೆದು ಮಕ್ಕಳ ರಕ್ಷಣಾ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಹೊನೋಲೆ ಮಾತನಾಡಿ, ಅಪರಾಧಿಗೆ ಶಿಕ್ಷೆಯಾಗುವವರೆಗೂ ತನಿಖಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿ ನೊಂದವರಿಗೆ ನ್ಯಾಯ ಒದಗಿಸಬೇಕು. ಪ್ರಕರಣ ದಾಖಲಿಸಲು ನೋಂದವರು ಪೊಲೀಸ್ ಠಾಣೆಗೆ ಬಂದರೆ ಅಧಿಕಾರಿಗಳು ವಿಳಂಬ ಮಾಡದೆ ಎಫ್ಐಆರ್ ದಾಖಲಿಸಬೇಕು. ವಿಳಂಬ ಧೋರಣೆ ಅನುಸರಿಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದರು.ಸಮಯದ ಅಭಾವವಿದ್ದಾಗ ಅಧಿಕಾರಿಗಳು ಆಡಿಯೋ ಮತ್ತು ವಿಡಿಯೋ ಮೂಲಕ ಸಾಕ್ಷಿ ಹೇಳಲು ಅವಕಾಶ ನೀಡಿ, ಪೂರಕ ವಾತಾವರಣ ಸೃಷ್ಟಿಸಲಾಗಿದೆ ಎಂದ ಅವರು, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದಿದ್ದು ಹೊಸ ವಿಚಾರ, ಚರ್ಚೆ ನಡೆಸಿ ತನಿಖೆ ಕೈಗೊಳ್ಳಬೇಕು ಎಂದು ಅವರು ನುಡಿದರು.
ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಬೆಂಗಳೂರಿನಿಂದ ಆಗಮಿಸಿದ್ದ ರೋಹಿತ್. ಸಿ.ಜೆ. ಅವರು ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿರಣ್ಣಗೌಡ , ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಡಾ. ಹನಮಂತ್ರಾಯ ಕರಡಿ, ಡಿ.ಎಸ್.ಪಿ. ಅರುಣ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮ್ ಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರಿದ್ದರು.