ರಾಮನಗರ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಎದುರು ಅನೇಕ ಸವಾಲುಗಳಿವೆ. ಅವೆಲ್ಲವನ್ನೂ ಮೆಟ್ಟಿ ಯಶಸ್ಸು ಸಾಧಿಸಬೇಕಾದರೆ ಆಧುನಿಕ ತಂತ್ರಜ್ಞಾನ ಕಲಿಯುವ ಜೊತೆಗೆ ಆಲೋಚನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಂಪ್ಯೂಟರ್ ಬಂದಾಗ ಉದ್ಯೋಗಗಳು ನಷ್ಟವಾಗುತ್ತದೆ ಎನ್ನಲಾಗುತ್ತಿತ್ತು. ಈಗ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತಗೊಳಿಸುತ್ತದೆ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಹಾಗಂತ ಕೈಕಟ್ಟಿಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ಎಐ ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಮತ್ತೊಂದು ಆವಿಷ್ಕಾರವನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂದರು.
ಈಗ ಸವಾಲುಗಳ ಮಧ್ಯೆ ಬದುಕಬೇಕಿದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಇಲ್ಲದಿದ್ದರೆ ನಿಮ್ಮಗಳ ಭವಿಷ್ಯ ಕಷ್ಟವಾಗುತ್ತದೆ. ಪ್ರತಿಯೊಬ್ಬರಿಗೂ ಅವಕಾಶ ಸಿಗುತ್ತದೆ. ಆದರೆ, ಪ್ರಯತ್ನಗಳು ನಿಲ್ಲಬಾರದು. ಪ್ರಯತ್ನ ನಿಲ್ಲಿಸಿದಾಗ ವಿಫಲರಾಗುತ್ತೀರಿ. ನಿಮ್ಮಗಳ ಚಿಂತನೆಗಳು ಯಾವಾಗಲು ದೂರದೃಷ್ಟಿಯಿಂದ ಕೂಡಿರಬೇಕು ಎಂದರು.ನಾನು ಕಷ್ಟ ಪಟ್ಟಂತೆ ನಮ್ಮ ಮಕ್ಕಳು ಕಷ್ಟ ಪಡಬಾರದು ಎಂಬ ಭಾವನೆ ಪೋಷಕರಲ್ಲಿದೆ. ಹೀಗಾಗಿ ಜೀವನ ಸಾಗಿಸುವುದೇ ಕಷ್ಟವಾಗಿದ್ದರೂ ಪೋಷಕರು ಕೂಲಿ ಮಾಡಿದರು ಸರಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ, ಆ ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗೊತ್ತಿಲ್ಲ. ನಿಮ್ಮ ಪೋಷಕರು ಮತ್ತು ನೀವು ಎದುರಿಸುತ್ತಿರುವ ಸವಾಲುಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ನಿಮ್ಮ ಪೋಷಕರು ಊರಿನಲ್ಲಿದ್ದು ಸಮಸ್ಯೆ ಎದುರಿಸುತ್ತಿದ್ದರು. ಆದರೆ, ನೀವು (ವಿದ್ಯಾರ್ಥಿಗಳು) ಎಲ್ಲೆಡೆಯೂ ಸವಾಲುಗಳನ್ನು ಎದುರಿಸಬೇಕಾಗಿದೆ. ಇದಕ್ಕಾಗಿ ಸಿದ್ಧರಾಗಬೇಕಿದೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ರಾಮನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.