ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಗವಾನ್ ಬುದ್ಧನ ತತ್ವ ಮತ್ತು ಸಂದೇಶಗಳನ್ನು ಪ್ರಚಾರ ಮಾಡಲು ಪೂರಕವಾಗುವಂತೆ ಒಂದು ಸುಸಜ್ಜಿತ ಬುದ್ಧ ಮಂದಿರ ಅಥವಾ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಎದುರಿನ ಬುದ್ಧ ಮೂರ್ತಿ ಬಳಿ ಶುಕ್ರವಾರ ಆಯೋಜಿಸಲಾದ ಭಗವಾನ್ ಬುದ್ಧ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರಿಸ್ತಪೂರ್ವದಲ್ಲೇ ಭಗವಾನ್ ಬುದ್ಧರು ಸಾರಿದ ಶಾಂತಿ ಮತ್ತು ಸಮಾನತೆಯ ತತ್ವಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಯುದ್ಧ ಮತ್ತು ಸಂಘರ್ಷಗಳ ನಡುವೆ ಬದುಕುತ್ತಿರುವ ನಮಗೆ ಬುದ್ಧನ ಸಂದೇಶಗಳು ದಾರಿದೀಪವಾಗಿವೆ ಎಂದರು.

ಭಗವಾನ್ ಬುದ್ಧರು ರೋಹಿಣಿ ನದಿ ನೀರಿನ ಹಂಚಿಕೆಗಾಗಿ ಎರಡು ಸಾಮ್ರಾಜ್ಯಗಳ ನಡುವೆ ಯುದ್ಧ ನಡೆದಾಗ, ಆ ಹಿಂಸೆಯನ್ನು ತಡೆಯಲು ತಮ್ಮ ಕಿರೀಟ, ಸಿಂಹಾಸನ ಮತ್ತು ರಾಜ್ಯವನ್ನೇ ತ್ಯಜಿಸಿದರು. ಅವರ ಈ ವಿಚಾರಗಳನ್ನು ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಕಷ್ಟಗಳಿಗೆ ನಾವೇ ಹೊಣೆ ಹೊರತು ಬೇರೆಯವರಲ್ಲ ಎಂಬ ಬುದ್ಧನ ನುಡಿಯಂತೆ, ನಮ್ಮ ದುಃಖಗಳಿಗೆ ಅಜ್ಞಾನ ಮತ್ತು ಅವಿದ್ಯೆಯೇ ಕಾರಣ. ಸರಿಯಾದ ಜ್ಞಾನ ಮಾರ್ಗವನ್ನು ಅನುಸರಿಸುವ ಮೂಲಕ ನಾವು ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಇಂದಿನ ಅಶಾಂತ ಜಗತ್ತಿಗೆ ಯುದ್ಧದ ಅಗತ್ಯವಿಲ್ಲ, ಬದಲಾಗಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳು ಅತ್ಯಗತ್ಯವಾಗಿವೆ. ಮನುಷ್ಯ ಇಂದು ಭೌತಿಕ ಆಸೆಗಳ ಅಮಲಿನಲ್ಲಿ ತೇಲುತ್ತಿದ್ದಾನೆ. ಈ ಅತಿಯಾದ ಆಸೆಯಿಂದಾಗಿ ಮನುಷ್ಯನ ಮನಸ್ಸಿನಲ್ಲಿ ಶಾಂತಿ ಇಲ್ಲದಂತಾಗಿದೆ. ಗೌತಮ ಬುದ್ಧ ಅಂದು ಹೇಳಿದ್ದ ಆಸೆಯೇ ದುಃಖಕ್ಕೆ ಮೂಲ ಎಂಬ ತತ್ವ ಇಂದಿನ ವಾಸ್ತವ ಜಗತ್ತಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದರು.


ಇಂದು ನಾವು ಆರ್ಥಿಕವಾಗಿ ಎಷ್ಟೇ ಶ್ರೀಮಂತರಾಗಿರಬಹುದು, ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿರಬಹುದು. ಆದರೆ ಮಾನಸಿಕವಾಗಿ ಬಡವರಾಗುತ್ತಿದ್ದೇವೆ. ಮನುಷ್ಯನಿಗೆ ತನ್ನ ಮೇಲೆಯೇ ತನಗೆ ನಂಬಿಕೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಅತಿಯಾದ ಆಸೆಯಿಂದಾಗಿ ಆರೋಗ್ಯವನ್ನು ಲೆಕ್ಕಿಸದೆ ಐಶ್ವರ್ಯದ ಬೆನ್ನತ್ತುತ್ತೇವೆ. ಕೊನೆಗೆ ಅದೇ ಐಶ್ವರ್ಯವನ್ನು ಮಾರಿ ಆರೋಗ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅಂತಿಮವಾಗಿ ಎರಡನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ಉತ್ತಮ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದರು. ಬುದ್ಧನ ಮಾರ್ಗವು ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಗೂ ಬಸವಣ್ಣನವರಂತಹ ಮಹಾನ್ ಚೇತನಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

ವಕೀಲ ವಿಶ್ವನಾಥ್.ಕೆ ವದ್ದಿಕೇರಿ ಬುದ್ಧ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸ್ವಾಗತಿಸಿದರು. ಗಂಗಾಧರ ಮತ್ತು ಕಲಾತಂಡದವರು ನಾಡಗೀತೆ ಹಾಡಿ, ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ನಿರೂಪಿಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಂತರ ಸಾರೋಟಿನಲ್ಲಿ ಬುದ್ಧನ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಮದಕರಿ ನಾಯಕ ವೃತ್ತ, ಜಿಲ್ಲಾಸ್ಪತ್ರೆ ಸರ್ಕಲ್ ಮೂಲಕ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣ ತಲುಪಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಸೀಲ್ದಾರ್ ಗೋವಿಂದರಾಜು, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಧಿಕಾರಿ ಪುಷ್ಪಲತಾ ಭಾವಿಮಠ, ವಲಯ ಅರಣ್ಯ ಸಂರಕ್ಷಣಾಧಿಕಾರಿ ವಸಂತಕುಮಾರ್ ಉಪಸ್ಥಿತರಿದ್ದರು.