ಕನ್ನಡಪ್ರಭ ವಾರ್ತೆ ಚಿತ್ರದುರ್ಗ
12ನೇ ಶತಮಾನದ ಬಸವಣ್ಣನ ಆಶಯಗಳು 21ನೇ ಶತಮಾನದಲ್ಲಿ ಈಡೇರಬೇಕಾದರೆ ಎಲ್ಲರೂ ಬಸವಾದಿ ಶರಣರ ಆಶಯಗಳು, ಬುದ್ಧನ ತತ್ವಗಳನ್ನು, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ಗ್ರಾಮದ ಪಾಪಣ್ಣಜ್ಜ-ಹನುಮಂತಜ್ಜ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಬುದ್ಧ-ಬಸವ-ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಇಂತಹ ಪರಿವರ್ತನೆಯ ಕಾರ್ಯಕ್ರಮ ನಡೆಯಬೇಕು. ಬಸವಾದಿ ಶರಣರು ಎಲ್ಲ ಸಮುದಾಯಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಅನುಭವ ಮಂಟಪದ ಮೂಲಕ ಸಮಾಜವನ್ನು ಪರಿವರ್ತನೆಯೆಡೆಗೆ ಕೊಂಡೊಯ್ಯುವ ಗುರುತರ ಕೆಲಸ ಮಾಡಿದ್ದರು. ಈಗಲೂ ಮಠಗಳು ಬಸವಣ್ಣರ ಹಾದಿಯಲ್ಲಿ ನಡೆಯಬೇಕು ಎಂದು ನುಡಿದರು.
ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಮಾತನಾಡಿ, ಸಂಸಾರಿಗಳಲ್ಲಿ ಸೊರಗಿ ಹೋಗಿರುವ ಭಾವನೆ ಬರುತ್ತದೆ. ಬುದ್ಧ ಮಹಾರಾಜನ ಮಗ. ಮಗ ಸುಖ ಸಂತೋಷದಿಂದ ಇರಬೇಕು ಅಂತ ತಂದೆ-ತಾಯಿಗಳಿಗೆ ಆಸೆಯಿತ್ತು. ಆದರೂ ಬುದ್ಧ ಮನೆ ಬಿಟ್ಟು ಹೋಗುತ್ತಾನೆ. ಅನುಭವಿಸಬೇಕಾದಂತಹ ಸುಖ ಭೋಗಗಳನ್ನು ತೊರೆದು ಹೋಗಲು ಕಾರಣ ಈ ಪ್ರಪಂಚಕ್ಕೆ ಏನಾದರೂ ಕೊಡಬೇಕು ಎಂಬ ಆಶಯ ಹೊಂದಿದ್ದರು ಎಂದರು.ನಮ್ಮ ಮೇಲೆ ಜಾತಿಯ ಹೊದಿಕೆ ಹೊದಿಸಿದ್ದಾರೆ. ಇಂತಹ ಹೊದಿಕೆಗಳನ್ನು ಎತ್ತಿ ಬಿಸಾಕಬೇಕು. ವಿವೇಚನೆ ಮಾಡಿ ಜೀವನ ಮಾಡಬೇಕು. ಅಂಬೇಡ್ಕರ್ ಅವರು ಜೀವನದಲ್ಲಿ ಪಟ್ಟಿರುವ ಕಷ್ಟ ಯಾರಾದರೂ ಪಟ್ಟಿದ್ದಾರೆ ಅಂದರೆ ಆ ಕಷ್ಟದ ಅನುಭವವಿರುತ್ತದೆ. ಅವರ ಬದುಕಿನ ಘಟನೆಗಳನ್ನು ನೆನೆದರೆ ರೋಮಾಂಚನ ಆಗುತ್ತದೆ. ರಾಮಾಯಣ, ಮಹಾಭಾರತ, ಬೈಬಲ್, ಖುರಾನ್ ಎಲ್ಲ ಧರ್ಮಗಳನ್ನು ಬರೆದವರು ಮನುಷ್ಯರೇ. ಆದರೂ ಮನುಷ್ಯ ಮನುಷ್ಯರನ್ನು ಜೋಡಿಸಲು ಆಗಲೇ ಇಲ್ಲ. ಬರೀ ತರ್ಕದಲ್ಲೇ ಕಾಲಹರಣ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ತೊಡರನಾಳ್ ಮಾತನಾಡಿ, ಎಲ್ಲಾ ರಂಗದಲ್ಲೂ ಜಾತೀಯತೆ ಮನೆಮಾಡಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕಿದೆ ಎಂದರು.
ಬಿಇಒ ಕೆ.ಎಸ್.ಸುರೇಶ್, ಮಹಿಳಾ ಹೋರಾಟಗಾರ್ತಿ ಬೈಲಮ್ಮ, ನಿವೃತ್ತ ರೈಲ್ವೆ ಅಧಿಕಾರಿ ಷಣ್ಮುಖಪ್ಪ, ಶಿವಶಂಕರ ಶೀಗೇಹಟ್ಟಿ, ರೇವಣ್ಣ, ಅಣ್ಣಪ್ಪ ಮಾತನಾಡಿದರು. ಜಗಲೂರಪ್ಪ, ಲಕ್ಷ್ಮಿಕಾಂತರೆಡ್ಡಿ, ಪ್ರಸನ್ನ ಇದ್ದರು. ಕಸವನಹಳ್ಳಿ ಶಿವಣ್ಣ ಕಾರ್ಯಕ್ರಮ ನಡೆಸಿಕೊಟ್ಟರು.