ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಶಿಫಾರಸು ಮಾಡಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಗದಗ: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್‌ಎಡಿಎಸ್) ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಒಂದು ವಾರದೊಳಗೆ ಪ್ರಗತಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಶಿಫಾರಸು ಮಾಡಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2024-25 ಮತ್ತು 2025-26ನೇ ಸಾಲಿನ ಎಂಪಿಎಲ್‌ಎಡಿಎಸ್ ಅನುದಾನದಡಿ ಹಂಚಿಕೆಯಾದ ಒಟ್ಟು 35 ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಪ್ರಸ್ತುತ 8 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದ್ದು, ಇನ್ನು11 ಕಾಮಗಾರಿಗಳಿಗೆ ಇಲಾಖೆಗಳಿಂದ ಅಂದಾಜು ಪತ್ರಿಕೆ ಸಲ್ಲಿಕೆಯಾಗದಿರುವುದಕ್ಕೆ ಹಾಗೂ 16 ಕಾಮಗಾರಿಗಳ ಎರಡನೇ ಹಂತದ ಅನುದಾನ ಬಿಡುಗಡೆಗೆ (ಶೇ. 25 ಬಿಲ್ ಪ್ರಗತಿ) ಪ್ರಸ್ತಾವನೆ ಸಲ್ಲಿಸದೇ ಇರುವುದಕ್ಕೆ ಅಧಿಕಾರಿಗಳ ವಿಳಂಬ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ಹಣ ವ್ಯರ್ಥವಾಗಬಾರದು. ಆರ್‌ಟಿಸಿ, ಆಸ್ತಿ ವಿವರ, ಈ-ಸ್ವತ್ತು ಮತ್ತು ಕಟ್ಟಡ ನಿರ್ಮಾಣ ಪರವಾನಗಿ ದಾಖಲೆಗಳಲ್ಲಿ ಯಾವುದೇ ತಾಂತ್ರಿಕ ತೊಂದರೆಗಳಿದ್ದರೂ ಅವುಗಳನ್ನು ತಕ್ಷಣವೇ ಬಗೆಹರಿಸಿ, ಒಂದು ವಾರದೊಳಗೆ ಎಲ್ಲ ದಾಖಲಾತಿಗಳನ್ನು ಸರಿಪಡಿಸಿ ವರದಿ ನೀಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶಿಸಿದರು.
ಸಭೆಯಲ್ಲಿ ಪ್ರಸ್ತಾಪಿಸಲಾದ 5 ಪ್ರಮುಖ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಏಜೆನ್ಸಿಗಳು ಅಥವಾ ಗುತ್ತಿಗೆದಾರರು ಒಂದು ವಾರದೊಳಗೆ ಅಗತ್ಯ ದಾಖಲೆಗಳನ್ನು ಒದಗಿಸದಿದ್ದರೆ, ಅನುದಾನವನ್ನು ರದ್ದುಪಡಿಸಿ ಬೇರೆ ಅಗತ್ಯ ಕಾಮಗಾರಿಗಳಿಗೆ ಮರುಹಂಚಿಕೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಕಂಪ್ಯೂಟರ್ ಉತಾರದಲ್ಲಿ ತಾಂತ್ರಿಕ ದೋಷ ಇರುವುದನ್ನು ಗಮನಿಸಿದ ಸಂಸದರು, ಸರ್ವೇ ನಂಬರ್ ಬದಲಾವಣೆ ಮತ್ತು ಇಲಾಖೆಯ ಹೆಸರಿನ ಗೊಂದಲಗಳನ್ನು ನಿವಾರಿಸಿ, ತಕ್ಷಣವೇ ನಿಯಮಾನುಸಾರ ಅಗತ್ಯ ಮಾರ್ಪಾಡುಗಳೊಂದಿಗೆ ಕಾಮಗಾರಿ ಪ್ರಾರಂಭಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಸಂಸದರು ನೀಡಿದ ಎಲ್ಲ ಸೂಚನೆಗಳನ್ನು ಜಿಲ್ಲಾಡಳಿತವು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದು ಭರವಸೆ ನೀಡಿದರು. ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಇತರ ಅನುಷ್ಠಾನಾಧಿಕಾರಿಗಳು ತಕ್ಷಣವೇ ಸಮನ್ವಯ ಸಾಧಿಸಿ ಪ್ರಕ್ರಿಯೆ ಸುಗಮಗೊಳಿಸಬೇಕು. ದರ್ಪಣ್ ಪೋರ್ಟಲ್ ಅಪ್‌ಡೇಟ್ ಮಾಡುವಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಸಂಸದರು ನೀಡಿರುವ ಗಡುವಿನೊಳಗೆ ಎಲ್ಲ ಬಾಕಿ ಇರುವ ಪ್ರಗತಿ ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ದರ್ಪಣ್ ಪೋರ್ಟಲ್‌ನಲ್ಲಿ ತಕ್ಷಣವೇ ಅಪ್‌ಡೇಟ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ನಿಗದಿತ ಕಾಲಮಿತಿಯೊಳಗೆ ಪ್ರಗತಿ ವರದಿಗಳನ್ನು ಸಲ್ಲಿಸದ ಅಥವಾ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರು, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್.ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.