ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ

KannadaprabhaNewsNetwork |  
Published : Mar 08, 2025, 12:30 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಡಾ. ರವಿಪ್ರಸಾದ್ ಸಜ್ಜನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನ ಪಡೆದು ಏಕಾಗ್ರತೆ, ಆತ್ಮವಿಶ್ವಾಸ, ಸತತ ಅಧ್ಯಯನದಿಂದ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಅಂತರಾಷ್ಟ್ರೀಯ ನೆನಪಿನ ಶಕ್ತಿಯ ತರಬೇತುದಾರ ಡಾ.ಎಂ.ರವಿಪ್ರಸಾದ್ ಸಜ್ಜನ್ ಹೇಳಿದರು.

ನಗರದ ಗುರು ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಹಮ್ಮಿಕೊಂಡಿದ್ದ ಪರೀಕ್ಷೆ ಒತ್ತಡ ಮತ್ತು ಸ್ಮರಣ ಶಕ್ತಿ ವೃದ್ಧಿ ಎಂಬ ಒಂದು ದಿನದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಇರುವ ಸಮಯದಲ್ಲಿ ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣದಿಂದ ಮೀಡಿಯಾ ಬಳಕೆ ಮಾಡುವುದರಿಂದ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಕುಂದಲು ಮುಖ್ಯ ಕಾರಣವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಇವುಗಳಿಂದ ದೂರವಿದ್ದರೆ ಮಾತ್ರ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

ಬಿಇಒ ಸಿ.ಎಂ.ತಿಪ್ಪೇಸ್ವಾಮಿ ತರಬೇತಿ ಶಿಬಿರ ಉದ್ಘಾಟಿಸಿ, ಡಾ.ರವಿಪ್ರಸಾದ್ ಸಜ್ಜನ್ ರವರು ಭಾರತ ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ತಮ್ಮ ತರಬೇತಿಗಳನ್ನು ಕೊಡುತ್ತಿದ್ದಾರೆ. ಇಷ್ಟೇ ಅಲ್ಲದೆ ಇತ್ತೀಚಿಗೆ ಅವರು ಸಿಂಗಾಪೂರ, ಬ್ಯಾಂಕಾಕ್, ಮಲೇಶಿಯಾ ಹೀಗೆ ವಿಶ್ವದಾದ್ಯಂತ ತಮ್ಮ ತರಬೇತಿ ಕಾರ್ಯಕ್ರಮವನ್ನು ವಿಸ್ತರಿಸಿದ್ದಾರೆ. ಇಂತಹ ಅಂತಾರಾಷ್ಟ್ರೀಯ ತರಬೇತಿದಾರರು ನಮ್ಮ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುತ್ತಿರುವುದು ನಮಗೆಲ್ಲ ಒಂದು ಸುವರ್ಣ ಅವಕಾಶ. ಡಾ.ರವಿಪ್ರಸಾದ್ ಸಜ್ಜನ್ ರವರು ಹಿರಿಯೂರಿನವರಾಗಿದ್ದು ಒಂದು ಸಾವಿರ ಮೊಬೈಲ್ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ವಿಶ್ವದಾಖಲೆ ಮಾಡಿರುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪೂರ್ತಿದಾಯಕವಾಗಿದೆ. ಹಾಗೆಯೇ ಇವರಿಂದ ತರಬೇತಿ ಪಡೆದಿರುವ ಹಿರಿಯೂರಿನ ಹಲವು ವಿದ್ಯಾರ್ಥಿಗಳು ವಿಶ್ವದಾಖಲೆ ಮಾಡಿರುವುದು ಸಹ ಒಂದು ಹೆಮ್ಮೆಯ ವಿಷಯ ಎಂದರು.

ಈ ತರಬೇತಿ ಶಿಬಿರದಲ್ಲಿ ತಾಲೂಕಿನ ಎಲ್ಲಾ ಶಾಲೆಗಳ ಸುಮಾರು ಒಂದು ಸಾವಿರ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತೋಟಗಾರಿಕೆ ಕಾಲೇಜಿನ ನಿವೃತ್ತ ಡೀನ್, ಕೃಷಿ ವಿಜ್ಞಾನಿ ಡಾ.ಬಿ.ಮಹಂತೇಶ್ ಸೇರಿದಂತೆ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ