ಕನಕಪುರ: ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ರಾಮಪ್ಪ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿಯ ಅಚ್ಚಲು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾ ಬೇಸಿಗೆ ಶಿಬಿರ- 2024 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಪ್ರೌಢಶಾಲೆಯಾದರೂ ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದ ರೀತಿಯಲ್ಲಿ ಇಲ್ಲಿನ ಮೈದಾನದ ಕ್ರೀಡಾವ್ಯವಸ್ಥೆ ಬಹಳಷ್ಟು ಅಚ್ಚುಕಟ್ಟಾಗಿದೆ. ಇದರಿಂದ ಆಗಿಯೇ ಈ ಶಾಲೆಯೂ ಹತ್ತಾರು ವರ್ಷಗಳಿಂದಲೂ ವಾಲಿಬಾಲ್ ಕ್ರೀಡೆಯಲ್ಲಿ ಮುಂದೆ ಬರಲು ಕಾರಣ ಎಂದು ಬಣ್ಣಿಸಿದರು. ಮಕ್ಕಳು ದಾರಿತಪ್ಪಲು ಇಂದಿನ ಆಧುನಿಕ ಯುಗದಲ್ಲಿ ಸಾಕಷ್ಟು ಅವಕಾಶಗಳು ಇರುವುದರಿಂದ ಅದಕ್ಕೆ ಅವಕಾಶ ಕೊಡಬಾರದು ಎಂದು ನಿಮ್ಮ ಶಾಲೆಯ ದೈಹಿಕ ಶಿಕ್ಷಕರು ಪ್ರತಿವರ್ಷ ಬೇಸಿಗೆ ಶಿಬಿರ ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ಎಂದರು.
ಮುಖ್ಯಶಿಕ್ಷಕ ಟಿ.ಪರಮೇಶ್ವರಪ್ಪ ಮಾತನಾಡಿ, ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಮಕ್ಕಳಿಗೆ ಶುಭ ಕೋರಿದರು. ಅಚ್ಚಲು ಗ್ರಾಪಂ ಪಿಡಿಒ ಬಂಗಾರಪ್ಪ, ಸಿಆರ್‌ಪಿ ಸಿದ್ದರಾಜು, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಇಸಿಒ ರಂಗಸ್ವಾಮಿ, ಎಚ್‌ಪಿಎಸ್ ಶಾಲೆಯ ಮುಖ್ಯಶಿಕ್ಷಕ ಚಂದ್ರಕಾಂತ್ ದೊಡ್ಡಮನಿ, ದೈಹಿಕ ಶಿಕ್ಷಕ ನಾಗರಾಜು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.ಕೆ ಕೆ ಪಿ ಸುದ್ದಿ 02:
ಕನಕಪುರ ತಾಲೂಕಿನ ಅಚ್ಚಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕ್ರೀಡಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.