ಕನ್ನಡಪ್ರಭ ವಾರ್ತೆ ಗುಡಿಬಂಡೆ
ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರತೆಗೆಯುವುದರ ಜೊತೆಗೆ ಅವರ ಮುಂದಿನ ಜೀವನಕ್ಕೆ ಬೇಸಿಗೆ ಶಿಬಿರಗಳು ಅತ್ಯಂತ ಅನುಕೂಲಕರವಾಗಿದ್ದು, ಮಕ್ಕಳು ಶಿಬಿರಗಳಲ್ಲಿ ಭಾಗವಹಿಸಬೇಕೆಂದು ನ್ಯೂ ವಿಷನ್ ಇಂಗ್ಲೀಷ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ ಅಭಿಪ್ರಾಯಪಟ್ಟರು.ಪಟ್ಟಣದ ನ್ಯೂ ವಿಷನ್ ಶಾಲೆಯಲ್ಲಿ ಬೆಂಗಳೂರಿನ ಸ್ಟ್ರಿಂಗ್ ಸಾಫ್ಟ್ ಲ್ಯಾಬ್ಸ್ ವತಿಯಿಂದ ‘ಸ್ಮೈಲ್ ಚೈತ್ರದ ಚಿಟ್ಟೆಗಳು’ ಎಂಬ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷ ಪೂರ್ತಿ ಮಕ್ಕಳು ಶಾಲೆಯಲ್ಲಿ ಪಠ್ಯದ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಪರೀಕ್ಷೆಯ ಬಳಿಕ ಎರಡು ತಿಂಗಳ ರಜೆಯಲ್ಲಿ ಅನೇಕ ಮಕ್ಕಳು ಸಮಯವನ್ನು ವ್ಯರ್ಥ ಮಾಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಹಮ್ಮಿಕೊಳ್ಳುವಂತಹ ಬೇಸಿಗೆ ಶಿಬಿರಗಳಲ್ಲಿ ಭಾಗಿಯಾಗಬೇಕು. ಆಗ ತಮ್ಮ ಪ್ರತಿಭೆಯನ್ನು ಮೆರಗುಗೊಳಿಸಲು ಸಹಾಯವಾಗುತ್ತದೆ. ಜೊತೆಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಹ ಅನುಕೂಲವಾಗುತ್ತದೆ. ಸ್ಟ್ರಿಂಗ್ ಸಾಫ್ಟ್ ಲ್ಯಾಬ್ಸ್ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಯಶಸ್ವಿಯಾಗಿ ಪೂರೈಸಿದ್ದು, ಅನೇಕ ಮಕ್ಕಳಿಗೆ ಅನುಕೂಲಕರವಾಗಿದೆ ಎಂದರು.
ಬಳಿಕ ಸ್ಟ್ರಿಂಗ್ ಸಾಫ್ಟ್ ಲ್ಯಾಬ್ಸ್ ನ ನಿರ್ದೇಶಕ ಮೋಹನ್ ರಾವ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ನಿಟ್ಟಿನಲ್ಲಿ ‘ಸ್ಮೈಲ್ ಚೈತ್ರದ ಚಿಟ್ಟೆಗಳು’ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಮಕ್ಕಳು ತುಂಬಾ ಕ್ರಿಯಾಶೀಲರಾಗಿ ಭಾಗಿಯಾಗಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಇಂತಹ ಬೇಸಿಗೆ ಶಿಬಿರಗಳು ಸಕ್ಸಸ್ ಆಗುವುದಿಲ್ಲ. ಈ ಶಿಬಿರದಲ್ಲಿ ಮೊದಲ 15 ದಿನ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಕಲಿಸಲಾಗಿತ್ತು. ಇದರ ಜೊತೆಗೆ ಕೆಲವೊಂದು ಸಾಂಸ್ಕೃತಿಕ ನೃತ್ಯಗಳನ್ನೂ ಸಹ ಕಲಿಸಲಾಗಿದೆ. ಈ ಶಿಬಿರದ ಮೂಲಕ ಅನೇಕ ಮಕ್ಕಳು ಅನುಕೂಲ ಪಡೆದುಕೊಂಡಿದ್ದು, ಅವರ ಭವಿಷ್ಯ ಮತಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.ಈ ಸಮಯದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಪೋಷಕರು, ತಮ್ಮ ಮಕ್ಕಳು ಯಾವ ರೀತಿ ಪ್ರಗತಿ ಹೊಂದಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದರು. ಬೆಂಗಳೂರಿನ ಸ್ಟ್ರಿಂಗ್ ಸಾಫ್ಟ್ ಲ್ಯಾಬ್ಸ್ ಸಿಇಒ ಮೋನಿಷಾ, ನಿವೃತ್ತ ಶಿಕ್ಷಕ ನಾಗಭೂಷಣಾಚಾರ್, ಗ್ರೀನ್ ಸೆಲ್ಯೂಷನ್ ಕಂಪ್ಯೂಟರ್ಸ್ ನ ಮುಖ್ಯಸ್ಥ ಬಿ.ಮಂಜುನಾಥ್, ಶಿಬಿರದ ತರಬೇತುದಾರ ಶ್ರೀನಿವಾಸ್, ಸುಮಾ ಸೇರಿ ಹಲವರು ಇದ್ದರು.