ಕನ್ನಡಪ್ರಭ ವಾರ್ತೆ ದಾವಣಗೆರೆ
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ, ರಾಜಿ ಮಾಡಿಕೊಳ್ಳಲು ಯೋಗ್ಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಮಾಧಾನ ಸಮಾರೋಪ ಎಂಬ ವಿಶೇಷ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಅದರಲ್ಲಿ ಸುಪ್ರೀಂ ಕೋರ್ಟ್‌ನ ಅಪಘಾತ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಕೆ.ವೇಲಾ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಮಾಧಾನ ಸಮಾರೋಹವೆಂಬ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಬರುವ ಆಗಸ್ಟ್ 21, 22 ಮತ್ತು 23ರಂದು ವಿಶೇಷ ಲೋಕ ಅದಾಲತ್ ಸಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.ಜಿಲ್ಲೆಗೆ ಸಂಬಂಧಿಸಿದ ಒಟ್ಟು 30 ಪ್ರಕರಣಗಳನ್ನು ವಿಶೇಷ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಪ್ರಕರಣದ ಎರಡೂ ಕಡೆಯ ಕಕ್ಷಿದಾರರಿಗೆ(ಪಾರ್ಟಿಗಳಿಗೆ) ಈಗಾಗಲೇ ಪ್ರಾಧಿಕಾರದಿಂದ ನೋಟಿಸ್‌ಗಳನ್ನು ಜಾರಿಗೊಳಿಸಲಾಗುತ್ತಿದೆ. ಕಕ್ಷಿದಾರರು ತಾಲೂಕುಗಳಲ್ಲಿದ್ದರೆ ಆಯಾ ತಾಲೂಕು ಕಾನೂನು ಸೇವಾ ಸಮಿತಿ ಮೂಲಕ, ದಾವಣಗೆರೆ ಜಿಲ್ಲೆಯಲ್ಲಿದ್ದರೆ ಜಿಲ್ಲಾ ಪ್ರಾಧಿಕಾರದ ಮೂಲಕ, ಒಂದು ವೇಳೆ ಕಕ್ಷಿದಾರರು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿದ್ದರೆ, ಆಯಾ ವ್ಯಾಪ್ತಿಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೋಟಿಸ್ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಕ್ಷಿದಾರರು ಅದಾಲತ್‌ಗೆ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗದಿದ್ದಲ್ಲಿ, ಅಂತಹವರಿಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಹಂತದಲ್ಲಿದ್ದ ಅಪಘಾತ ಪರಿಹಾರದ ಕ್ಲೈಮ್ ಪ್ರಕರಣವೊಂದು ಸಂಧಾನದ ಮೂಲಕ ಯಶಸ್ವಿ ತೀರ್ಮಾನ ಕಂಡಿದೆ. ದಾವಣಗೆರೆ ನ್ಯಾಯಾಲಯದಲ್ಲಿ ಎಂವಿಸಿ ಸಂಖ್ಯೆ 856/2016 ರಡಿ ದಾಖಲಾಗಿದ್ದ ಪ್ರಕರಣ ಇದಾಗಿದ್ದು, ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ 875029 ರು. ಪರಿಹಾರ ನೀಡಲಾಗಿತ್ತು, ನಂತರ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ 4,53,473 ರು. ಹೆಚ್ಚುವರಿ ಪರಿಹಾರ ನೀಡಿ ಆದೇಶಿಸಿತ್ತು. ಸದರಿ ಪರಿಹಾರದ ಮೊತ್ತ ಸಾಲದೆಂದು ಕಕ್ಷಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣವು ಎಸ್.ಎಲ್.ಪಿ ಸಂಖ್ಯೆ: 8750/2024 ರಡಿ ದಾಖಲಾಗಿತ್ತು ಎಂದು ಹೇಳಿದ್ದಾರೆ.