ಕನ್ನಡಪ್ರಭ ವಾರ್ತೆ ಹಾಸನ

ಮಾಲಿನ್ಯಗೊಳ್ಳುತ್ತಿರುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಗಿಡಗಳನ್ನು ನೆಟ್ಟು ನೀರೆರೆದು ಬೆಳೆಸುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು. ನಮ್ಮ ಸುತ್ತಮುತ್ತಲ ಪರಿಸರವನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ಹೇಳಿದರು.ನಗರದ ಆರ್. ಸಿ. ರಸ್ತೆಯಲ್ಲಿರುವ ಜಿ.ಜಿ. ಜೆ.ಸಿ. ಪ್ರಧಾನ ಪ್ರೌಢಶಾಲಾ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪರಿಸ್ಪರ ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಬೇಕು, ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು. ಹಿರಿಯ ಶಿಕ್ಷಕರಾದ ಎಚ್. ಪಿ. ಮಂಜುಳಾ ಅವರು ಮಾತನಾಡಿ ವಿಶ್ವ ಪರಿಸರ ದಿನಾಚರಣೆಯನ್ನು ಇಡೀ ವಿಶ್ವದಾದ್ಯಂತ ಇಂದು ಆಚರಿಸಲಾಗುತ್ತಿದೆ. ಕಾರಣ ಇಂದಿನ ಆಧುನಿಕ ಜಗತ್ತು ಪರಿಸರ ಮಾಲಿನ್ಯತೆಯಿಂದ ತುಂಬಿದೆ. ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿ, ನೀರು ಗಾಳಿಯನ್ನು ನಾವೆಲ್ಲರೂ ಉಳಿಸಿ ಕೊಡುಗೆಯಾಗಿ ನೀಡಬೇಕಿದೆ ಎಂದರು. ವಿಜ್ಞಾನ ಶಿಕ್ಷಕರಾದ ಮಧು ಪಿ ಅವರು ಮಾತನಾಡಿ ಜೂನ್ - ಜುಲೈ ತಿಂಗಳು ಮಳೆಗಾಲವಾಗಿರುವುದರಿಂದ ಗಿಡಗಳನ್ನು ನೆಡುವುದು ಸೂಕ್ತ. ಹಾಗಾಗಿಯೇ ವಿಶ್ವಸಂಸ್ಥೆ ಜೂನ್ ೫ನೇ ತಾರೀಖನ್ನು ಪರಿಸರ ದಿನವನ್ನಾಗಿ ಗುರ್ತಿಸಿದೆ ಎಂದರು. ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಇರುವಷ್ಟು ಜಾಗದಲ್ಲಿಯೇ ಔಷಧಿಯುಕ್ತ ಸಸ್ಯಗಳನ್ನು ನೆಟ್ಟು ಬೆಳೆಸಬೇಕು. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರವು ನಮ್ಮನ್ನು ರಕ್ಷಿಸುತ್ತದೆ ಎಂದರು.ಶಾಲೆಯ ಸಹ ಶಿಕ್ಷಕರಾದ ಕೆ.ಎನ್ ಚಿದಾನಂದರವರು ಮಾತನಾಡುತ್ತಾ, ಇಪ್ಪತ್ತೊಂದನೇ ಶತಮಾನದಲ್ಲಿ ಇಡೀ ಮಾನವಕುಲ ಮತ್ತು ಜೀವಸಂಕುಲವನ್ನು ಕಾಡುತ್ತಿರುವ ಅತ್ಯಂತ ಕಠಿಣ ಹಾಗೂ ಗಂಭೀರವಾದ ಸಮಸ್ಯೆ ಎಂದರೆ ’ಜಾಗತಿಕ ತಾಪಮಾನ ಏರಿಕೆ. ಕೈಗಾರಿಕೀಕರಣ, ನಗರೀಕರಣ ಮತ್ತು ಮಾನವನ ಮಿತಿಮೀರಿದ ಸ್ವಾರ್ಥದ ಪರಿಣಾಮವಾಗಿ ಭೂಮಿಯ ವಾತಾವರಣದಲ್ಲಿ ಉಷ್ಣಾಂಶವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಜಾಗತಿಕ ಜ್ವರಕ್ಕೆ ಪ್ರಮುಖ ಕಾರಣ ಮತ್ತು ಇದಕ್ಕೆ ಇರುವ ಏಕೈಕ ನೈಸರ್ಗಿಕ ಮದ್ದು ಪರಿಸರದಲ್ಲಿದೆ. ಪರಿಸರವನ್ನುನ್ನು ನಾಶಪಡಿಸುತ್ತಿರುವುದು ತಾಪಮಾನ ಏರಿಕೆಗೆ ಕಾರಣವಾದರೆ, ಪರಿಸರ ಸಂರಕ್ಷಣೆ ಮಾಡುವುದು ಈ ಮಹಾವಿಪತ್ತಿನಿಂದ ಬ್ರಹ್ಮಾಂಡವನ್ನು ಉಳಿಸುವ ದಾರಿಯಾಗಿದೆ ಎಂದರು. ಶಿಕ್ಷಕರಾದ ರುದ್ರೇಶ್ ರವರು ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಪರಿಸರದ ಅರಿವು ಮೂಡಿಸುವ ಮೂಲಕ ಶಾಲೆಯ ಒಳಗೆ ಮತ್ತು ಹೊರಗಿನ ಪರಿಸರವನ್ನು ಸ್ಪಚ್ಛವಾಗಿಟ್ಟುಕೊಳ್ಳಬೇಕು ಎಂದರು. ಎ.ವಿ. ಗೀತಾರಾಣಿಯವರು ಮಾತನಾಡಿ ಪ್ಲಾಸ್ಟಿಕ್ ನ ಬದಲಾಗಿ ಬಟ್ಟೆಯ ಚೀಲಗಳನ್ನು ಬಳಸುವುದು ಪರಿಸರ ಸಂರಕ್ಷಣೆಯಲ್ಲಿ ಉತ್ತಮ ಮಾರ್ಗ ಎಂದರು. ಎಸ್.ಕೆ. ಪೂರ್ಣಿಮಾರವರು ಮಾತನಾಡಿ ಇಂದು ನಾವು ಸೇವಿಸುವ ಆಹಾರ, ನೀರು, ಗಾಳಿ ಎಲ್ಲವೂ ಮಲಿನಗೊಳ್ಳುತ್ತಿರುವದಕ್ಕೆ ನಮ್ಮ ಮಿತಿಮೀರಿದ ಬೇಡಿಕೆಗಳೇ ಕಾರಣವಾಗಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗ್ರತರಾಗಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಕೊನೆಯಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಕಾರ್ಯಕ್ರದಲ್ಲಿ ಎಂ.ಆರ್ ರಂಗಾಮಣಿ, ಚಿದಾನಂದ, ತೈಬಾ ಕೌಸರ್ ಹಾಗೂ ಸತ್ಯನಾರಾಯಣ ಮುರಳಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.