ಕೈ ಶಾಸಕರ ಜತೆಗಿನ ಸುರ್ಜೇವಾಲಾ ಸಭೆ ಮುಕ್ತಾಯ

KannadaprabhaNewsNetwork |  
Published : Jul 10, 2025, 12:50 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ, ಅಹವಾಲು ಆಲಿಸುವ ಸಲುವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಬುಧವಾರ 17 ಮಂದಿ ಶಾಸಕರೊಂದಿಗೆ ಸಭೆ ನಡೆಸಿದ್ದು, 103 ಶಾಸಕರೊಂದಿಗೆ ಸಭೆಯೂ ಪೂರ್ಣಗೊಂಡಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ, ಅಹವಾಲು ಆಲಿಸುವ ಸಲುವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಬುಧವಾರ 17 ಮಂದಿ ಶಾಸಕರೊಂದಿಗೆ ಸಭೆ ನಡೆಸಿದ್ದು, 103 ಶಾಸಕರೊಂದಿಗೆ ಸಭೆಯೂ ಪೂರ್ಣಗೊಂಡಂತಾಗಿದೆ.

ಜು.7 ಸೋಮವಾರದಿಂದ ನಡೆದ ಎರಡನೇ ಹಂತದ ಸಭೆಯಲ್ಲಿ ಮೂರು ದಿನಗಳ ಕಾಲ 61 ಮಂದಿ ಶಾಸಕರನ್ನು ಮುಖಾಮುಖಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಈ ಅವಧಿಯಲ್ಲಿ ಕಲಬುರಗಿ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ತುಮಕೂರು ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಶಾಸಕರೊಂದಿಗೆ ವೈಯಕ್ತಿಕವಾಗಿ ಸಭೆ ನಡೆಸಿದರು.

ಎರಡು ವರ್ಷದಲ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಭವಿಷ್ಯದ ಯೋಜನೆಗಳು, ಕ್ಷೇತ್ರದಲ್ಲಿ ಕೆಲಸ ಮಾಡಲು ಉಂಟಾಗುತ್ತಿರುವ ಅಡ್ಡಿಗಳು, ಸರ್ಕಾರ ಹಾಗೂ ಉಸ್ತುವಾರಿ ಸಚಿವರ ಸ್ಪಂದನೆ, ಅಧಿಕಾರಿಗಳ ಸಹಕಾರದ ಬಗ್ಗೆ ಸಿದ್ಧ ಪ್ರಶ್ನಾವಳಿ ಮೂಲಕ ಸುರ್ಜೇವಾಲಾ ಅವರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ.

ಈ ಎಲ್ಲಾ ವರದಿಯನ್ನು ಕ್ರೋಢೀಕರಿಸಿ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆ ದೆಹಲಿಯಲ್ಲಿ ಗುರುವಾರ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್‌ ಖಾನ್‌ ವಿರುದ್ಧ ಹೊಸಪೇಟೆ ಶಾಸಕ ಗವಿಯಪ್ಪ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಕೂಡ್ಲಿಗಿ ಶಾಸಕ ಶ್ರೀನಿವಾಸ್‌ ಸೇರಿ ಹಲವು ಶಾಸಕರು ಭೇಟಿ ಮಾಡಿದ್ದು, ಶಾಮನೂರು ಶಿವಶಂಕರಪ್ಪ ಅವರು ದೂರವಾಣಿ ಮೂಲಕವೇ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.ಯೋಗೇಶ್ವರ್‌ ವಿರುದ್ಧ ಮೊದಲ ಪತ್ನಿ,

ಪುತ್ರಿಯಿಂದ ಸುರ್ಜೇವಾಲಾಗೆ ದೂರು

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರಿಗೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಅವರ ಮೊದಲ ಪತ್ನಿ ಹಾಗೂ ಪುತ್ರಿ ದೂರು ನೀಡಿದ್ದು, ಯೋಗೇಶ್ವರ್‌ ಅವರಿಂದ ಆಗುತ್ತಿರುವ ಕಿರುಕುಳ ತಡೆಯುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪುತ್ರಿ ನಿಶಾ ಯೋಗೇಶ್ವರ್, ನಿಮ್ಮಿಂದ ಸಹಾಯ ಆಗದಿದ್ದರೂ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಕೋರಿದ್ದೇವೆ. ನಮ್ಮ ನಡುವೆ ಕೇವಲ ಆಸ್ತಿ ವ್ಯಾಜ್ಯ ಮಾತ್ರವಿಲ್ಲ. ನಮಗೆ ಮಾನಸಿಕವಾಗಿ ನಮ್ಮ ತಂದೆ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು.

PREV