ಬಸವರಾಜ ಹಿರೇಮಠ
ರಾಜ್ಯ ಹಿಂದುಳಿದ ಆಯೋಗವು ನಡೆಸಿದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಧಾರವಾಡ ಜಿಲ್ಲೆಯಲ್ಲಿ ಪೂರ್ಣವಾಗಿದ್ದು, ಶೇ.92.02ರಷ್ಟು ಜನರು ಗಣತಿದಾರರಿಗೆ ತಮ್ಮ ಮಾಹಿತಿ ಹಂಚಿಕೊಂಡಿದ್ದರೆ, ಶೇ.7.8ರಷ್ಟು ಜನರು ಸಮೀಕ್ಷೆಯನ್ನು ತಿರಸ್ಕಾರ ಮಾಡಿರುವುದಾಗಿ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ವಿದ್ಯುತ್ ಮೀಟರ್‌ಗಳ ಅನ್ವಯ ಜಿಲ್ಲೆಯಲ್ಲಿ 5.46 ಲಕ್ಷ ಕುಟುಂಬಗಳ 20.53 ಲಕ್ಷ ಜನರಿಂದ ಮಾಹಿತಿ ಸಂಗ್ರಹಣೆಯ ಗುರಿ ಹೊಂದಲಾಗಿತ್ತು. ಈ ಪೈಕಿ ಸುಮಾರು 4.5 ಲಕ್ಷ ಕುಟುಂಬಗಳ 18.89 ಲಕ್ಷ ಜನರ ಮಾಹಿತಿಯನ್ನು ಗಣತಿದಾರರು ಯಶಸ್ವಿಯಾಗಿ ಸಂಗ್ರಹಿಸಿದ್ದಾರೆ. ಗಣತಿದಾರರಲ್ಲಿ ಮಾಹಿತಿ ಹಂಚಿಕೊಳ್ಳದ 1.64 ಲಕ್ಷ ಜನರ ಪೈಕಿ 15,222 ನಿವಾಸಿಗಳು ಹೊರ ಜಿಲ್ಲೆ ಅಥವಾ ಹೊರ ರಾಜ್ಯ, ದೇಶದಲ್ಲಿದ್ದಾರೆ. ಅಂದಾಜು 26 ಸಾವಿರ ಜನರು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡಿದ್ದು ಸುಮಾರು 1.22 ಲಕ್ಷ ಜನರು ಸಮೀಕ್ಷೆಯನ್ನು ನೇರವಾಗಿ ತಿರಸ್ಕಾರ ಮಾಡಿದ್ದಾರೆ.ಸ್ವಯಂ ಪ್ರೇರಿತ:
ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿ ನಡೆದ ಈ ಸಮೀಕ್ಷೆಯು ಪ್ರಾರಂಭದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ವೈಯಕ್ತಿಕ ವಿಚಾರ, ಬ್ಯಾಂಕ್ ಮಾಹಿತಿ, ಜಾತಿ ಸಮಸ್ಯೆಗಳ ಕಾರಣದಿಂದ ವಿರೋಧ ಪಕ್ಷಗಳು ಸಾಕ್ಷಷ್ಟು ಆಕ್ಷೇಪಣೆ ವ್ಯಕ್ತಪಡಿಸಿದವು. ಇದು ಸಾಮಾನ್ಯವಾಗಿ ಜನರಲ್ಲಿ ಗೊಂದಲ ಮತ್ತು ಹಿಂಜರಿಕೆಗೂ ಕಾರಣವಾಯಿತು. ಹಿಂದುಳಿದ ಸಮುದಾಯಗಳ ಕೆಲವರು ಗಣತಿದಾರರು ಮಾಹಿತಿ ಪಡೆಯುವ ಮೊದಲು ಜಾತಿ ಪ್ರಮಾಣಪತ್ರ ಕೊಡಿಸುತ್ತೀರಾ? ಎಂಬೆಲ್ಲಾ ವಿಚಿತ್ರ ಪ್ರಶ್ನೆಗಳನ್ನು ಸಹ ಕೇಳಿದ್ದುಂಟು.
ರಜೆಯಲ್ಲೂ ಗಣತಿ:
ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರ ವಿಶೇಷ ಪ್ರಯತ್ನದ ಫಲವಾಗಿ ಜಿಲ್ಲೆಯ ಸಮೀಕ್ಷೆಯನ್ನು ಮುಕ್ತಾಯಗೊಳಿಸಲಾಗಿದೆ. ಸುಮಾರು 1.22 ಲಕ್ಷ ಜನರು ಮಾಹಿತಿ ನೀಡಲು ನಿರಾಕರಿಸಿದ್ದು ಶೇ.92.2ರಷ್ಟು ಸಾಧನೆಯಾಗಿದೆ. ವೈಯಕ್ತಿಕವಾಗಿ ವಿವರಗಳನ್ನು ನೀಡಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದವರಿಗೆ ಆನ್‌ಲೈನ್ ಸ್ವಯಂ ಘೋಷಣೆ ಲಿಂಕ್ ಮೂಲಕವೂ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ, ಕೆಲವರು ಸಂಪೂರ್ಣವಾಗಿ ಸಮೀಕ್ಷೆಯನ್ನೇ ತಿರಸ್ಕರಿಸಿದ್ದಾರೆ. ಹಲವು ನಿವಾಸಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭಾನುಮತಿ ಎಚ್, ಪತ್ರಿಕೆಗೆ ಮಾಹಿತಿ ನೀಡಿದರು.