ರೋಣ: ಕುಷ್ಠರೋಗ ತಡೆಗೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಅಗತ್ಯ ಔಷಧೋಪಚಾರ ನೀಡಬೇಕು. ಇದರಿಂದ ಅಂಗವಿಕಲತೆ ಮತ್ತು ಸಾಂಕ್ರಾಮಿಕತೆಯನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಎಲ್ಲ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆ ಸಿಬ್ಬಂದಿ ಒಗ್ಗೂಡಿ ಸಹಕಾರ ನೀಡಬೇಕೆಂದು ತಹಸೀಲ್ದಾರ್ ನಾಗರಾಜ ಕೆ. ತಿಳಿಸಿದರು.
ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಇವರ ಆಶ್ರಯದಲ್ಲಿ ಕುಷ್ಠರೋಗ ಪತ್ತೆ ಆಂದೋಲನ ಅಂಗವಾಗಿ ಜರುಗಿದ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತಮಾಡಿದರು.ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡುವುದರಿಂದ ಪ್ರಕರಣಗಳನ್ನು ಆದಷ್ಟು ಬೇಗನೆ ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜತೆಗೆ ಹೊಸ ಪ್ರಕರಣ ಹತೋಟಿಗೆ ತರಬಹುದಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ ಮಾತನಾಡಿ, ಕುಷ್ಠರೋಗವು ಮೈಕೋ ಬ್ಯಾಕ್ಟೀರಿಯ ಲೆಪ್ರೆ ಎಂಬ ರೋಗಾಣವಿನಿಂದ ಹರಡುತ್ತಿದೆ. ಸೋಂಕಿತ ವ್ಯಕ್ತಿಯ ದೀರ್ಘಾವಧಿಯ ಸಂಪರ್ಕದಿಂದ ಇತರರಿಗೆ ಕಾಯಿಲೆ ಕಾಣಿಸಿಕೊಳ್ಳಬಹುದು. ಹಾಗಾಗಿ ಕಳೆದ ಐದು ವರ್ಷದಲ್ಲಿ ಕುಷ್ಠರೋಗ ಪ್ರಕರಣಗಳು ಪತ್ತೆಯಾದ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಎಲ್‌ಸಿಡಿಸಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಬೇರೆ ಬೇರೆ ಇಲಾಖೆಗಳ ಸಮನ್ವಯತೆಯಿಂದ ಹೊಸ ಕುಷ್ಠರೋಗ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದರಿಂದ ಕುಷ್ಠರೋಗದಿಂದ ಆಗಬಹುದಾದ ಅಂಗವಿಕಲತೆ ಸೋಂಕು ಮತ್ತು ದೀರ್ಘಾವಧಿಯ ಚಿಕಿತ್ಸೆಯನ್ನು ಕೂಡ ಕಡಿಮೆ ಮಾಡಬಹುದು ಎಂದರು.ಈ ವೇಳೆ ನ. 24ರಿಂದ ಡಿ. 9ರ ವರಗೆ ಜರುಗಲಿರುವ ಕುಷ್ಠರೋಗ ಪತ್ತೆ ಆಂದೋಲನ ಜಾಗೃತ ಕಾರ್ಯಕ್ರಮದ ಪ್ರಚಾರ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಡಾ. ಅರವಿಂದ ಕಂಬಳಿ, ಡಾ. ಪ್ರಕಾಶ ಕಮತೆ, ಪೌರಾಡಳಿತ ಇಲಾಖೆ ಶಿವಕುಮಾರ ಇಲಹಾಳ, ಮಂಜುನಾಥ ಕೊಂಡಗುಡಿ, ಗಿರಿಜಾ ದೊಡ್ಡಮನಿ, ಎಸ್.ವಿ. ಅಡಗತ್ತಿ, ಬಿಸಿಎಂ ಇಲಾಖೆ ರೇಖಾ ಹಿರೇಹೊಳಿ, ವಿ.ಎಸ್. ಅಲ್ಲಿಪುರ ಹಾಗೂ ಆರ್.ಬಿ.ಎಸ್.ಕೆ. ತಂಡದ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.