ಹಾವೇರಿ: ಪಿ.ಎಂ. ಪೋಷಣ್ ಯೋಜನೆಯಡಿ ಶಾಲೆಗಳ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಜಿಪಂ ಸಿಇಒ ದಲ್ಜೀತ್‌ಕುಮಾರಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಕರಿಗಾರ, ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದ ಎಲ್‌ಪಿ ಗ್ಯಾಸ್ ಸಿಲಿಂಡರಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನದ ಉಪಾಹಾರ )ಯೋಜನೆಗೆ ನಿರಂತರವಾಗಿ ಎಲ್‌ಪಿ ಗ್ಯಾಸ್ ಸಿಲಿಂಡರ್‌ಗಳು ಅಗತ್ಯ ಇರುತ್ತದೆ. ಮುಂಬರುವ ಜೂ.1ರಿಂದ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭವಾಗಲಿದ್ದು, ಹಾವೇರಿ ಜಿಲ್ಲೆಯ ಪಿಎಂ ಪೋಷಣ್ ಯೋಜನೆಯಡಿ ಬರುವ ಎಲ್ಲಾ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ತೊಂದರೆಯಾಗದಂತೆ ಅಗತ್ಯ ವಸ್ತುಗಳ ಕಾಯಿದೆಯಡಿ ಪರಿಗಣಿಸಿ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸಬೇಕೆಂದು ಒತ್ತಾಯಿಸಿದರು.ಜತೆಗೆ ಶಾಲೆಗಳಿಗೆ ಗ್ಯಾಸ್ ಪೂರೈಕೆ ವೇಳೆ ಓಟಿಪಿ ಹಾಗೂ ನೋಂದಣಿ ವ್ಯವಸ್ಥೆಯಿಂದ ವಿನಾಯಿತಿ ನೀಡಬೇಕು. ಒಂದುವೇಳೆ ನೋಂದಣಿ ಕಡ್ಡಾಯವಾದಲ್ಲಿ ನೋಂದಣಿಯಾದ ದಿನವೇ ಸಿಲಿಂಡರ್ ವಿತರಿಸಬೇಕು. ಎಲ್‌ಪಿಜಿಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಚೆಕ್ ಮೂಲಕ ಪಡೆಯಲು ಎಲ್ಲಾ ಎಜೆನ್ಸಿಗಳಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿ, ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.ಮನವಿ ನೀಡುವ ವೇಳೆ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಎಸ್. ಪಾಟೀಲ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.