ಬಿಸಿಎಂ ಇಲಾಖೆಯ ಅಧಿಕಾರಿ ಮಾತಿಗೆ ಆಕ್ರೋಶ, ಗಣತಿದಾರರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಸಾಮಾಜಿಕ ಹಾಗೂ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕಾರ್ಯ ತಾಂತ್ರಿಕ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗಿದೆ. ಆ್ಯಪ್ ಕಾರ್ಯನಿರ್ವಹಿಸಲಾಗದೇ ಶಿಕ್ಷಕರು ಗಣತಿಯೇ ಸಾಕಪ್ಪ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ ಒಂದೆಡೆ ಗಣತಿಯೂ ಆಗದು, ರಜೆಯೂ ಸಿಗದು ಎಂಬ ನೋವಿನಲ್ಲಿ ಶಿಕ್ಷಕ ವರ್ಗವಿದೆ.ಈ ಸಮಸ್ಯೆ ಬಗೆಹರಿಸುವಂತೆ ಬುಧವಾರ ಸಂಜೆ ಶಿಕ್ಷಕರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಗಣತಿದಾರರು ಗಣತಿಗೆ ಹೋದ ಸಂದರ್ಭದಲ್ಲಿ ಉಂಟಾಗುತ್ತಿರುವ ತೊಡಕುಗಳ ಬಗ್ಗೆ ವಿವರಿಸುತ್ತಿರುವಾಗ, ಏಕಾಏಕಿ ಕೋಪಗೊಂಡ ದಾಕ್ಷಾಯಿಣಿ ನಾಯ್ಕ, ಶಿಕ್ಷಕರ ಬಗ್ಗೆ ಅಗೌರವದ ಮಾತುಗಳನ್ನಾಡಿದ್ದು, ಗಣತಿದಾರರನ್ನು ಕೆರಳಿಸಿತು. ತರಬೇತಿಯಲ್ಲಿ ಸರಿಯಾಗಿ ತಿಳಿದುಕೊಳ್ಳದೇ ಈಗ ಬಂದು ಗಲಾಟೆ ಮಾಡುತ್ತಿದ್ದೀರಿ, ಸರಿಯಾಗಿ ತಿಳಿದುಕೊಳ್ಳುವ ಸಹನೆಯೂ ಇಲ್ಲ, ಅನಗತ್ಯವಾಗಿ ದೊಂಬಿ ಮಾಡಲು ಇಲ್ಲಿಗೆ ಬಂದಿದ್ದೀರಿ ಎಂದು ಹೇಳಿದಾಗ ಇನ್ನೂ ಶಿಕ್ಷಕರು ಕೆಂಡಾಮಂಡಲವಾದರು. ಅಸಡ್ಡೆಯಾಗಿ ಮಾತನಾಡಿರುವುದು ಗಣತಿದಾರರ ಅಸಮಾಧಾನಕ್ಕೆ ಕಾರಣವಾಯಿತು.
ನಂತರ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಬಂದು ಶಿಕ್ಷಕರ ಸಮಸ್ಯೆಯನ್ನು ಸಹನೆಯಿಂದ ಆಲಿಸಿದರು. ದಾಕ್ಷಾಯಿಣಿ ನಾಯ್ಕ ಪರವಾಗಿ ತಾವು ಕ್ಷಮೆ ಕೇಳುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಶಿಕ್ಷಕರು, ನೀವು ಕ್ಷಮೆ ಕೇಳುವುದು ಬೇಡ, ನಿಮ್ಮ ಬಗ್ಗೆ ಗೌರವವಿದೆ. ಅವರೇ ಬಂದು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.
ತಹಸೀಲ್ದಾರರು ಪುನಃ ಚೇಂಬರ್‌ಗೆ ಕರೆದೊಯ್ದು, ಮನವೊಲಿಸುವ ವಿಫಲ ಯತ್ನ ನಡೆಯಿತು. ಆದರೆ ಕೊನೆಗೆ ಹೊರಬಂದ ತಹಸೀಲ್ದಾರ, ದಾಕ್ಷಾಯಿಣಿ ನಾಯ್ಕ ಕ್ಷಮೆ ಕೇಳಲು ಸಿದ್ಧರಿಲ್ಲ. ಹಾಗಾಗಿ ಅವರನ್ನು ಗಣತಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದೇವೆ. ಬೇರೆ ಅಧಿಕಾರಿ ನೇಮಕಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ಅನಾರೋಗ್ಯ ಅಥವಾ ಯಾವುದೇ ಕಾರಣದಿಂದ ಗಣತಿಯಲ್ಲಿ ಭಾಗವಹಿಸಲು ಆಗದೇ ಇದ್ದರೆ ಅಂತಹ ಶಿಕ್ಷಕರು ಲಿಖಿತವಾಗಿ ಮನವಿ ನೀಡಿದರೆ, ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದಾಗ ಶಿಕ್ಷಕರು ಪ್ರತಿಭಟನೆ ಕೈಬಿಟ್ಟರು.