ಕನ್ನಡಪ್ರಭ ವಾರ್ತೆ ಸಾಗರ
ಬೆಳಿಗ್ಗೆ ಶ್ರೀ ದೇವಿಗೆ ವಿಶೇಷ ಪೂಜೆ ಜತೆಗೆ ಮಾಂಗಲ್ಯಧಾರಣೆ ಶಾಸ್ತ್ರ ನಡೆಯಿತು. ದೇವಸ್ಥಾನದ ಅರ್ಚಕ ವೃಂದ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಭಕ್ತರಿಗೆ ಉಡಿತುಂಬಲು ಅವಕಾಶ ನೀಡಲಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಅಮ್ಮನ ದರ್ಶನ ಪಡೆದು ಉಡಿ ತುಂಬಿದರು. ಅಮ್ಮನವರು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳದಲ್ಲಿಯೆ ಹಾಜರಿದ್ದರು. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ.ಬೆನಕ ಪ್ರಸಾದ್ ಇತರರು ಉಪಸ್ಥಿತರಿದ್ದರು. ಫೆ.11ರವರೆಗೆ ಜಾತ್ರೆ ನಡೆಯಲಿದೆ.
ಅಮ್ಮನವರ ದರ್ಶನಕ್ಕೆ ಕಿ.ಮೀ.ಗಟ್ಟಲೆ ಸಾಲು:ಶ್ರೀ ಮಾರಿಕಾಂಬೆ ದರ್ಶನಕ್ಕೆ ಭಕ್ತರು ನೂಗುನುಗ್ಗಲು ಮಾಡಿದ್ದು ಕಂಡು ಬಂದಿದೆ. ರಾತ್ರಿ ೯ ಗಂಟೆಯಿಂದಲೇ ಮಾರಿಕಾಂಬಾ ದೇವಿ ಪೂಜೆಗೆ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ ನಿಂತವರಿಗೆ ಬೆಳಿಗ್ಗೆ ೫ ಗಂಟೆಗೆ ಅಮ್ಮನ ದರ್ಶನವಾದರೆ ಬೆಳಿಗ್ಗೆ ೫ರ ನಂತರ ಅಮ್ಮನ ದರ್ಶನಕ್ಕೆ ಬಂದವರಿಗೆ ಮಧ್ಯಾಹ್ನವಾದರೂ ದರ್ಶನ ಭಾಗ್ಯ ಸಿಗಲಿಲ್ಲ. ಅಮ್ಮನವರ ದರ್ಶನಕ್ಕೆ ೨ - ೫ ಕಿ.ಮೀ.ವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.
ಆರಂಭದಲ್ಲಿ ಪಾಸ್ ವ್ಯವಸ್ಥೆ ಇಲ್ಲ ಎಂದು ಹೇಳಿದ್ದ ಸಮಿತಿ ಭಕ್ತರ ಒತ್ತಾಯಕ್ಕೆ ಮಣಿದು ಪಾಸ್ ವ್ಯವಸ್ಥೆ ಕಲ್ಪಿಸಿತ್ತು. ಪಾಸ್ ವ್ಯವಸ್ಥೆ ಸಮಿತಿಗೆ ಮುಳುವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ೧೨೦೦ ರು. ಕೊಟ್ಟು ದೇವಿ ದರ್ಶನಕ್ಕೆ ವಿಶೇಷ ಪಾಸ್ ಪಡೆದವರಿಗೆ ಮಧ್ಯಾಹ್ನ ೨ ಗಂಟೆಯಾದರೂ ಅಮ್ಮನವರ ದರ್ಶನ ಭಾಗ್ಯ ಸಿಗಲಿಲ್ಲ. ದೇವಸ್ಥಾನದಿಂದ ಕೈನಲ್ಲಿ ಪಾಸ್ ಹಿಡಿದು ನಿಂತ ಭಕ್ತರ ಸರದಿ ನೆಹರೂ ಮೈದಾನ ದಾಟಿ ಹೋಗಿತ್ತು. ಅನ್ನದಾಸೋಹ ಮತ್ತು ದೇವಿ ದರ್ಶನಕ್ಕೆ ೨೦೦೦ ರೂ. ಪಾಸ್ ಮಾಡಲಾಗಿತ್ತು. ಈ ಪಾಸ್ ಪಡೆದವರಿಗೆ ಸಹ ಅಮ್ಮನ ದರ್ಶನ ಸುಲಭವಾಗಿ ಸಿಗಲಿಲ್ಲ. ದೇವಸ್ಥಾನದಿಂದ ಸೊರಬ ರಸ್ತೆಯವರೆಗೂ ಬಿಸಿಲಿನಲ್ಲಿ ಪಾಸ್ ಇದ್ದರೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಾರಿಕಾಂಬಾ ದೇವಿ ದರ್ಶನ ಜನರಿಗೆ ಸುಲಭವಾಗಿ ಸಿಗಬೇಕು ಎಂದು ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಇದಕ್ಕಾಗಿ ಸುಮಾರು ೫೦೦ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಅತಿಹೆಚ್ಚಿನ ಪೊಲೀಸ್ ವ್ಯವಸ್ಥೆಯೆ ಭಕ್ತರ ಅಸಮಾಧಾನಕ್ಕೆ ಕಾರಣವಾಯಿತು.
ದೇವಿಯ ದರ್ಶನಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ಬಿಜೆಪಿ ಪ್ರಮುಖರು ಸ್ಥಳದಲ್ಲಿಯೆ ಪ್ರತಿಭಟನೆ ನಡೆಸಿ, ಪೊಲೀಸರಿಗೆ ದಿಕ್ಕಾರ ಕೂಗಿದರು. ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಮಾಜಿ ಸದಸ್ಯ ಆರ್. ಶ್ರೀನಿವಾಸ್ ಇತರರು ಪೊಲೀಸರು ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಮ್ಮನವರ ದರ್ಶನಕ್ಕೂ ಅವಕಾಶ ಕೊಡದಂತೆ ಅವರನ್ನು ತಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಭಕ್ತರಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ. ಬೆನಕ ಪ್ರಸಾದ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಜಾತ್ರೆ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಇವರು ಕಾರ್ಯನಿಮಿತ್ತ ದೇವಸ್ಥಾನಕ್ಕೆ ಹೋಗಲು ಸಹ ಪೊಲೀಸರು ಅವಕಾಶ ನೀಡಲಿಲ್ಲ. ತಮ್ಮ ಬಳಿ ಇರುವ ಪಾಸ್ ತೋರಿಸಿದರೂ ಬಂದೋಬಸ್ತಿನಲ್ಲಿದ್ದ ಪೊಲೀಸರು ಬಿಡಲು ಒಪ್ಪದೆ ಇದ್ದಾಗ ಸಂಚಾಲಕರು ತಮಗೆ ನೀಡಿದ ಬ್ಯಾಡ್ಜ್ ಮತ್ತು ಬ್ಯಾಗ್ ಎಸೆದು ಪೊಲೀಸರಿಗೆ ಧಿಕ್ಕಾರ ಕೂಗುವ ಜತೆಗೆ ತಾವು ಸಮಿತಿ ವಹಿಸಿದ ಕೆಲಸ ಮಾಡುವುದಿಲ್ಲವೆಂದು ಹಠ ಹಿಡಿದ ಘಟನೆ ನಡೆಯಿತು. ಜತೆಗೆ ಭಕ್ತರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲವೆಂದು ಸರದಿ ಸಾಲಿನಲ್ಲಿ ನಿಂತ ಭಕ್ತರೂ ಧಿಕ್ಕಾರ ಕೂಗಿದರು.
ಕಾಗೋಡು ತಿಮ್ಮಪ್ಪ ಅಸ್ವಸ್ಥ