- ಲಿಂ. ಉಮಾಪತಿ ಶ್ರೀ, ವಾಗೀಶ ಶ್ರೀ ಪುಣ್ಯಸ್ಮರಣೋತ್ಸವ-ಧರ್ಮಸಭೆಯಲ್ಲಿ ಡಾ.ಅಥಣಿ ವೀರಣ್ಣ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಮ್ಮ ಸಮಾಜ ಕವಲುದಾರಿಯಾಗಿದೆ. ನಾವು ವೀರಶೈವರಾ, ಲಿಂಗಾಯತರಾ ಅಂದ್ರೆ ಎರಡೂ ಅಲ್ಲ. ಹಾಗಿದ್ದರೂ ಎರಡೂ ಹೌದು. ನಾವು ಹಿಂದೂ ಸಮಾಜದಲ್ಲಿ ಬಂದಿರುವವರು. ಇತರೆಯಲ್ಲಿ ಬರೆಸಿದರೆ ನಾವು ಲೆಕ್ಕಕ್ಕಿಲ್ಲದಂತಾಗುತ್ತದೆ. ಹಿಂದೂ ಎಂದೇ ಬರೆಸಬೇಕೆಂದು ಕೊಂಡೆವು. ಆದರೆ ಕೆಲವು ನಾಯಕರು ನುಣುಚಿಕೊಂಡರು, ಕೈಬಿಟ್ಟರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಡಾ.ಅಥಣಿ ಎಸ್. ವೀರಣ್ಣ ಹೇಳಿದರು.ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿರುವ ದಾವಣಗೆರೆ ಹರಿಹರ ಅರ್ಬನ್ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಶ್ರೀ ಶೈಲ ಜಗದ್ಗುರು ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 14ನೇ ವಾರ್ಷಿಕ ಪುಣ್ಯಸ್ಮರಣೋತ್ಸವ, ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 39ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಆಯೋಜಿಸಿದ್ದ ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಪುಣ್ಯಾರಾಧನಾ ಸೇವಾ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಶೈಲ ಪೀಠದ ಲಿಂ.ವಾಗೀಶ ಪಂಡಿತಾರಾಧ್ಯರು ಸಂಸ್ಕೃತ, ಹಿಂದಿ, ಕನ್ನಡ, ಉರ್ದು ಭಾಷೆಯಲ್ಲಿ ಪ್ರವಚನ ನೀಡುತ್ತಿದ್ದರು. ಜಾತಿ, ಮತ, ಪಂಥದಾಚೆಗೆ ಎಲ್ಲಾ ಭಕ್ತರನ್ನು ಆಕರ್ಷಿಸುವ ಆಯಸ್ಕಾಂತೀಯ ಗುಣ ಹೊಂದಿದ್ದರು ಎಂದರು.
ಶ್ರೀ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀಶೈಲ ಮಹಾಪೀಠದ ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಹೊನ್ನಾಳಿ ಹಿರೇಕಲ್ ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಹಾಗೂ ಮುಸ್ಟೂರು ಓಂಕಾರ ಉಚ್ಚನಾಗಲಿಂಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯಿತು.
ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಎಸ್.ಜಿ.ಉಳುವಯ್ಯ, ಮಲ್ಲಿಕಾರ್ಜುನ ತ್ಯಾವಣಿಗೆ, ಮತ್ತಿತರರು ಭಾಗವಹಿಸಿದ್ದರು. ಪ್ರೊ.ಸಿ.ಜಿ.ಮಠಪತಿ ಉಪನ್ಯಾಸ ನೀಡಿದರು. ವಾಗೀಶ ಸ್ವಾಮಿ ಸ್ವಾಗತಿಸಿದರು, ಸೌಭಾಗ್ಯ ಎಸ್.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.- - -
ವಾಗೀಶ ಸ್ವಾಮೀಜಿ ನಂತರ ಉಮಾಪತಿ ಸ್ವಾಮೀಜಿಗಳು ಸಹ ಅನೇಕ ಕಾರ್ಯಗಳನ್ನು ಮಾಡಿದರು. ಇವರ ನಂತರ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯರು ಸ್ನಾತಕೋತ್ತರ ಪದವಿ ಪಡೆದು ಚಿನ್ನದ ಪದಕ ಪಡೆದಿದ್ದರು. ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಪದವಿ ಪಡೆದರು. ದಾವಣಗೆರೆಯ ಶ್ರೀಶೈಲ ಮಠದಲ್ಲಿ ನೂರಾರು ಮಕ್ಕಳಿಗೆ ಸಂಸ್ಕೃತ ಪಾಠಶಾಲೆ ಆರಂಭಿಸಿದ್ದಾರೆ
- ಎನ್.ಎ. ಮುರುಗೇಶ್, ಕಾರ್ಯಾಧ್ಯಕ್ಷ- - -