ವಿಶ್ವದ ಅತಿ ದೊಡ್ಡ ಪ್ರಭೇದದ ಪತಂಗ ಕಾರವಾದದಲ್ಲಿ ಪತ್ತೆ!

KannadaprabhaNewsNetwork |  
Published : Oct 27, 2025, 12:15 AM IST
Uttara Kannada Atlas Moth

ಸಾರಾಂಶ

ಕಾರವಾರದ ಗುಡ್ಡೆಹಳ್ಳಿಯಲ್ಲಿ ವಿಶ್ವದ ಅತಿ ದೊಡ್ಡ ಪ್ರಭೇದಕ್ಕೆ ಸೇರಿದ ‘ಅಟ್ಲಾಸ್ ಪತಂಗ’ ಪತ್ತೆಯಾಗಿದೆ. ಪ್ರಪಂಚದಲ್ಲೇ ಅತಿ ದೊಡ್ಡ ಆಕಾರ ಹೊಂದಿರುವ ಕೀಟಗಳ ಜಾತಿಗೆ ಸೇರಿದ ಪತಂಗ ಇದಾಗಿದ್ದು, ಇದನ್ನು ‘ಅಟ್ಲಾಸ್ ಮೋತ್’ ಎಂದು ಕರೆಯಲಾಗುತ್ತದೆ

 ಕಾರವಾರ/ಹುಬ್ಬಳ್ಳಿ :  ಕಾರವಾರದ ಗುಡ್ಡೆಹಳ್ಳಿಯಲ್ಲಿ ವಿಶ್ವದ ಅತಿ ದೊಡ್ಡ ಪ್ರಭೇದಕ್ಕೆ ಸೇರಿದ ‘ಅಟ್ಲಾಸ್ ಪತಂಗ’ ಪತ್ತೆಯಾಗಿದೆ. ಪ್ರಪಂಚದಲ್ಲೇ ಅತಿ ದೊಡ್ಡ ಆಕಾರ ಹೊಂದಿರುವ ಕೀಟಗಳ ಜಾತಿಗೆ ಸೇರಿದ ಪತಂಗ ಇದಾಗಿದ್ದು, ಇದನ್ನು ‘ಅಟ್ಲಾಸ್ ಮೋತ್’ ಎಂದು ಕರೆಯಲಾಗುತ್ತದೆ. ಪತ್ರಕರ್ತ ರವಿ ಗೌಡ ಎಂಬುವರು ಗುಡ್ಡೆಹಳ್ಳಿಗೆ ಚಾರಣಕ್ಕೆ ತೆರಳಿದ್ದ ವೇಳೆ ಈ ಪತಂಗ ಪತ್ತೆಯಾಗಿದೆ.

ಸಾಧಾರಣವಾಗಿ ಮಳೆಗಾಲದಲ್ಲಿ ಕರಾವಳಿ ವ್ಯಾಪ್ತಿಯ ಕಾಡುಗಳಲ್ಲಿ ಈ ದೈತ್ಯಾಕಾರದ ಪತಂಗ ಕಂಡು ಬರುತ್ತದೆ. Attacus atlas ಎನ್ನುವ ವೈಜ್ಞಾನಿಕ ಹೆಸರು ಹೊಂದಿರುವ ಈ ಪತಂಗ, ರೆಕ್ಕೆಗಳನ್ನು ಬಿಡಿಸಿದಾಗ ಸುಮಾರು 24 ಸೆಂ.ಮೀ.ಗಳಷ್ಟು ವಿಸ್ತೀರ್ಣ ಹೊಂದಿರುತ್ತದೆ.

ನಿರ್ದಿಷ್ಟ ಮರಗಳ ಎಲೆಗಳ ಮೇಲೆ ಮಾತ್ರ ಈ ಪತಂಗ ಮೊಟ್ಟೆ ಇಡುತ್ತದೆ

ಕೆಲವು ನಿರ್ದಿಷ್ಟ ಮರಗಳ ಎಲೆಗಳ ಮೇಲೆ ಮಾತ್ರ ಈ ಪತಂಗ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರ ಬಂದ ಹುಳು (ಲಾರ್ವಾ) ಆ ಮರದ ಎಲೆಗಳನ್ನು ತಿಂದು ಶಕ್ತಿಯನ್ನು ಸಂಗ್ರಹಿಸಿ ಕೋಶ (ಕೋಕೂನ್) ರಚಿಸುತ್ತದೆ. ಕೋಶದಿಂದ ಹೊರ ಬಂದ ಪೂರ್ಣಾವಸ್ಥೆಯ ಪತಂಗವು ಸಂತಾನೋತ್ಪತ್ತಿಯ ನಂತರ ಸಾಯುತ್ತದೆ. ಗಂಡು ಪತಂಗವು ಹೆಣ್ಣು ಪತಂಗದೊಂದಿಗೆ ಸೇರಿದ ಬಳಿಕ ಸಾಯುತ್ತದೆ. ಹೆಣ್ಣು ಪತಂಗ ಮೊಟ್ಟೆ ಇಟ್ಟ ಬಳಿಕ ಸಾಯುತ್ತದೆ ಎನ್ನುತ್ತಾರೆ ಕೀಟ ತಜ್ಞರು.

ಈ ಪತಂಗಕ್ಕೆ ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆ ಇರುವುದಿಲ್ಲ

ವಿಶೇಷವೆಂದರೆ, ಈ ಪತಂಗಕ್ಕೆ ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆ ಇರುವುದಿಲ್ಲ. ಹುಳು ಆಗಿರುವಾಗಲೇ ಸಾಕಷ್ಟು ಎಲೆಗಳನ್ನು ತಿಂದು, ಬೇಕಾದ ಎಲ್ಲಾ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಕೋಶದಿಂದ ಹೊರ ಬಂದು ಪೂರ್ಣಾವಸ್ಥೆಯ ಪತಂಗವಾದ ನಂತರ ಯಾವುದೇ ಆಹಾರ ತಿನ್ನುವುದಿಲ್ಲ. ಈ ಕಾರಣದಿಂದ ಇದು ಕೇವಲ ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕುತ್ತದೆ.

ತನ್ನಲ್ಲಿ ಉಳಿದಿರುವ ಶಕ್ತಿಯನ್ನು ಉಳಿಸಿಕೊಳ್ಳಲು ಇದು ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಹೆಚ್ಚಿನ ಸಮಯ ಎಲೆಗಳ ಮೇಲೆ ವಿಶ್ರಾಂತಿ ಪಡೆಯುತ್ತದೆ. ದಿನಗಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ, ಹಕ್ಕಿಗಳು, ಓತಿ ಮತ್ತು ಇರುವೆಗಳಿಗೆ ಸುಲಭ ಆಹಾರ ಎನ್ನುತ್ತಾರೆ ಕೀಟ ತಜ್ಞರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!