ಕೆರೆ ಶಾಶ್ವತ, ರೈತರು ತ್ವರಿತವಾಗಿ ಭೂಮಿ ನೀಡಿ । ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ
ಕನ್ನಡಪ್ರಭ ವಾರ್ತೆ ಕುಕನೂರುಇರುವಂತ ಕೆರೆಗಳಿಗೆ ನೀರು ತುಂಬಿಸುವುದಲ್ಲ. ಯಲಬುರ್ಗಾ ಕ್ಷೇತ್ರದಲ್ಲಿ ಹೊಸ ಕೆರೆ ನಿರ್ಮಿಸಿ ನೀರು ತುಂಬಿಸುವ ಕಾರ್ಯ ಆಗುತ್ತಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಸಿದ್ನೇಕೊಪ್ಪ, ಮಾಳೆಕೊಪ್ಪ, ನಿಂಗಾಪೂರ ಗ್ರಾಮದಲ್ಲಿ ₹970 ಕೋಟಿ ಅನುದಾನದಲ್ಲಿ 38 ಕೆರೆ ನಿರ್ಮಾಣ ಯೋಜನೆಗೆ ಜಮೀನು ಲಭ್ಯತೆಯ ಬಗ್ಗೆ ಹಿರಿಯರು, ರೈತ ಪ್ರತಿನಿಧಿಗಳೊಂದಿಗೆ ಜರುಗಿದ ಚರ್ಚಾ ಸಭೆಯಲ್ಲಿ ಮಾತನಾಡಿದರು.ಯಲಬುರ್ಗಾ ಕ್ಷೇತ್ರದಲ್ಲಿ ಬೇರೆ ಕಡೆಯಿಂದ ಹಳ್ಳ ಹರಿದು ಬರುವುದಿಲ್ಲ. ಕ್ಷೇತ್ರದ ನಾನಾ ಗ್ರಾಮದಲ್ಲಿ ಕೇವಲ ಚಿಕ್ಕ ಚಿಕ್ಕ ಕೆರೆಗಳು ಮಾತ್ರ ಇವೆ. ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆ ನಿರ್ಮಾಣ ಮಾಡಬೇಕು ಎಂದು ₹970 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ನಾರಾಯಣಪೂರ ಡ್ಯಾಂನಿಂದ 150 ಕಿಮೀ ದೂರದಿಂದ ನೂತನ ಪೈಪ್ ಲೈನ್ ಹಾಗೂ ಕ್ಷೇತ್ರದಲ್ಲಿ ವಿವಿಧ ಗ್ರಾಮದ ಸಂಪರ್ಕಕ್ಕೆ 200 ಕಿಮೀ ಪೈಪ್ ಲೈನ್ ಸುಮಾರು ₹650 ಕೋಟಿ ವೆಚ್ಚದಲ್ಲಿ ಮಾಡಲಾಗುವುದು. ನೂತನ ಕೆರೆ ನಿರ್ಮಾಣಕ್ಕೆ ಅವಶ್ಯಕವಾಗಿ ಜಮೀನು ಬೇಕು. ಹೊಸದಾಗಿ ಕೆರೆ ತೆಗೆದು ನೀರು ತುಂಬಿಸುವ ಕಾರ್ಯ ಆಗುತ್ತಿದೆ. ಇದಕ್ಕೆ ರೈತರು ತ್ವರಿತವಾಗಿ ಭೂಮಿ ನೀಡಿ. ಕೆರೆಗಳ ಕಾರ್ಯ ಶಾಶ್ವತ ಆಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ನೀರಿನ ಅಭಾವವೇ ಇರುವುದಿಲ್ಲ. ಕಾನೂನು, ಹಣಕಾಸು, ತಾಂತ್ರಿಕ, ಭೌಗೋಳಿಕ ಸಮಸ್ಯೆಗಳನ್ನು ದಾಟೀ ಕೆರೆ ನಿರ್ಮಾಣಕ್ಕೆ ಮಂಜೂರಾತಿ ತಂದಿದ್ದೇವೆ. ಇದೊಂದು ಸದಾವಕಾಶ ಆಗಿದ್ದು, ರಾಜ್ಯದಲ್ಲಿ ಈ ಸಲ ಅನುಮೋದನೆ ದೊರೆತ ದೊಡ್ಡ ಯೋಜನೆ ಇದಾಗಿದೆ ಎಂದರು.ಕೆರೆ ನಿರ್ಮಾಣ ಕಾರ್ಯ ಯುದ್ದೋಪಾದಿಯಲ್ಲಿ ಸಾಗುತ್ತಿದೆ. ಅದಕ್ಕೆ ರೈತರು ತ್ಯಾಗ ಮನೋಭಾವದಿಂದ ಜಮೀನು ನೀಡಲು ಮುಂದಾಗಬೇಕು ಎಂದರು.
ಸೋಂಪೂರು ಗ್ರಾಮದಲ್ಲಿ ಶಾಲೆ ಜಾಗದ ತೆರವಿಗೆ ಜಮೀನು ಮಾಲೀಕ ತಕರಾರು ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದಾಗ ರಾಯರಡ್ಡಿ ಅವರು ತಕರಾರು ಮಾಡುವುದು ಸರಿಯಲ್ಲ ಎಂದರು.ಸ್ಥಳದಲ್ಲಿದ್ದ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಈ ಹಿಂದೆ ಪಹಣಿಯಲ್ಲಿ ಶಾಲೆ ಜಾಗ ಎಂದು ನಮೂದು ಆಗಿದೆ. ದಾಖಲಾತಿಗಳು ಶಾಲೆ ಪರವಾಗಿ ಇವೆ. ಗ್ರಾಮಸ್ಥರು ಶಾಲೆ ಜಾಗದ ಬಗ್ಗೆ ಚಿಂತಿಸಬೇಡಿ ಎಂದರು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಅಭಿಯಂತರ ಮಂಜುನಾಥ ಮಾತನಾಡಿ, ಕುಕನೂರು, ಯಲಬುರ್ಗಾದಲ್ಲಿ ಕೊಪ್ಪಳ ಏತ ನೀರಾವರಿ ಪ್ರದೇಶದಿಂದ ಹೊರಗುಳಿದ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಿ ಕೆರೆ ತುಂಬಿಸಲಾಗುವುದು. ನಾರಾಯಣಪುರದಿಂದ ಪೈಪ್ ಲೈನ್ ಸಹ ಹೊಸದಾಗಿ ನಿರ್ಮಾಣ ಮಾಡಲಾಗುವುದು ಎಂದರು.ತಹಸೀಲ್ದಾರ್ ಮಹೇಶ ಮಾಲಗಿತ್ತಿ, ತಾಪಂ ಇಒ ಸಂತೋಷ ಬಿರಾದಾರ, ಗುತ್ತಿಗೆದಾರ ಷಡಕ್ಷರಯ್ಯ ನವಲಿ ಹಿರೇಮಠ, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಪ್ರಮುಖರಾದ ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಅಶೋಕ ತೋಟದ, ಶಿವನಗೌಡ ದಾನ ರೆಡ್ಡಿ, ಸಂಗಮೇಶ ಗುತ್ತಿ, ಮಂಜುನಾಥ ಕಡೇಮನಿ, ಬಸವರಾಜ ಮಾಸೂರು, ಸಂತೋಷ ಬೆಣಕಲ್ಲ, ಮಂಜುನಾಥ ಸೋಂಪೂರು ಇತರರಿದ್ದರು.