ಶನೇಶ್ವರರ ದೇವಸ್ಥಾನ ನಿರ್ಮಾಣವಾಗಿರುವುದು ನಮ್ಮೆಲ್ಲರ ಪುಣ್ಯ

KannadaprabhaNewsNetwork |  
Published : May 19, 2026, 04:00 AM IST
17ಎಂಯುಡಿ1 | Kannada Prabha

ಸಾರಾಂಶ

ಶನೇಶ್ವರರ ದರ್ಶನಕ್ಕಾಗಿ ನಮ್ಮ ಭಾಗದ ಜನತೆ ಸಾವಿರಾರು ರುಪಾಯಿ ಖರ್ಚು ಮಾಡಿ, ದಿನಗಟ್ಟಲೆ ಪ್ರಯಾಣ ಬೆಳೆಸಿ ಮಹಾರಾಷ್ಟ್ರದವರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಈಗ ನಮ್ಮ ಪಟ್ಟಣದಲ್ಲಿಯೇ ಶನೇಶ್ವರರ ಭವ್ಯ ಮಂದಿರ ನಿರ್ಮಾಣವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶನೇಶ್ವರರ ದರ್ಶನಕ್ಕಾಗಿ ನಮ್ಮ ಭಾಗದ ಜನತೆ ಸಾವಿರಾರು ರುಪಾಯಿ ಖರ್ಚು ಮಾಡಿ, ದಿನಗಟ್ಟಲೆ ಪ್ರಯಾಣ ಬೆಳೆಸಿ ಮಹಾರಾಷ್ಟ್ರದವರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಈಗ ನಮ್ಮ ಪಟ್ಟಣದಲ್ಲಿಯೇ ಶನೇಶ್ವರರ ಭವ್ಯ ಮಂದಿರ ನಿರ್ಮಾಣವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಭಿಪ್ರಾಯಪಟ್ಟರು.ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ನೂತನ ಶನೇಶ್ವರ ದೇವಸ್ಥಾನದಲ್ಲಿ ಶನೇಶ್ವರ ಜಯಂತಿ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಭಾಗದ ಜನತೆಗೆ ದೈವಭಕ್ತಿ ಜಾಸ್ತಿ. ಅದರಲ್ಲೂ ಶನಿಮಹಾತ್ಮನ ದೋಷ ನಿವಾರಣೆಗೆ, ಕಾಟ ಪರಿಹಾರಕ್ಕೆ ಮಹಾರಾಷ್ಟ್ರದ ಶನಿ ಶಿಂಗಣಾಪೂರದವರೆಗೆ ಹೋಗಿ ಬರಲು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿತ್ತು. ಈಗ ಇಲ್ಲಿಯೇ ಇಷ್ಟೊಂದು ಸುಂದರ ಮತ್ತು ದೈವಿಕ ಕಳೆಯಿಂದ ಕೂಡಿರುವ ಶನೇಶ್ವರ ದೇವಸ್ಥಾನ ನಿರ್ಮಾಣವಾಗಿರುವುದು ಈ ಭಾಗದ ವಯೋವೃದ್ಧರಿಗೆ, ಮಹಿಳೆಯರಿಗೆ ಸೇರಿದಂತೆ ಎಲ್ಲ ಭಕ್ತರಿಗೆ ಶನಿದೇವರ ದರ್ಶನದ ಭಾಗ್ಯ ಬಹುಸುಲಭವಾಗಿ ದೊರೆತಂತಾಗಿದೆ. ಅಲ್ಲದೇ ಈ ಭಾಗದ ಜನತೆಯ ಮನೆ-ಮನಗಳಲ್ಲಿ ಸಂತಸ ತಂದಿದೆ. ಬರುವ ದಿನಗಳಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರತಿಯೊಬ್ಬರೂ ಶ್ರಮಿಸೋಣ ಎಂದರು.ಗಣ್ಯ ವ್ಯಾಪಾರಿ ವಿಕ್ರಂ ಓಸ್ವಾಲ್ ಮಾತನಾಡಿ, ದೇವಸ್ಥಾನಗಳನ್ನ ನಿರ್ಮಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೆ, ಒಬ್ಬ ನಿವೃತ್ತ ಕೆಎಸ್‌ಆರ್‌ಟಿಸಿ ನೌಕರರಾದ ನಾಗಪ್ಪ ಮಕ್ತೇದಾರ ಅವರು ತಾವೊಬ್ಬರೇ ನಿಂತು ದಾನಿಗಳ ಸಹಾಯದಿಂದ ಇಂಥದ್ದೊಂದು ಭವ್ಯ ದೇವಸ್ಥಾನ ನಿರ್ಮಿಸಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂಜಿವಿಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರಕಾಶ ನರಗುಂದ ಮಾತನಾಡಿ, ಹಿಂದೂ ಧರ್ಮದಲ್ಲಿ ಶನೇಶ್ವರ ದೇವರು ಎಂದರೇ ಸ್ವಲ್ಪ ಭಯ ಜಾಸ್ತಿ. ಸಾಮಾನ್ಯವಾಗಿ ಶನೇಶ್ವರರನ್ನು ಮನೆಯಲ್ಲಿರಿಸಿಕೊಂಡು ಪೂಜಿಸೋದು ವಿರಳ. ಹಾಗಾಗಿ ಈ ಭಾಗದ ಜನತೆಯ ದರ್ಶನಕ್ಕೆ ಈ ದೇವಾಲಯ ಅತೀ ಅವಶ್ಯವಿತ್ತು. ಸದ್ಯ ನಿರ್ಮಾಣವಾಗಿರುವ ಈ ದೇವಾಲಯ ಕೇವಲ ಪಟ್ಟಣದಕ್ಕೆ ಮಾತ್ರ ಸೀಮಿತವಾಗಿರದೇ ಸುತ್ತ-ಮುತ್ತಲಿನ ನಾಲ್ಕಾರು ತಾಲೂಕುಗಳಿಗೂ ಕೇಂದ್ರಬಿಂದುವಾಗಿದೆ ಎಂದರು.ಅರ್ಚಕ ನಾಗಪ್ಪ ಮಕ್ತೇದಾರ ಮಾತನಾಡಿ, ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯಗೈದ ಎಲ್ಲ ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು. ಶಿಕ್ಷಕಿ ಗೀತಾಂಜಲಿ ಕೋರಿ, ಚಂದ್ರಶೇಖರ ಪ್ಯಾಟಿಗೌಡರ, ರೂಪಾ ಪತ್ತಾರ, ಪ್ರಾಚಾರ್ಯ ಪ್ರಕಾಶ ರಾಠೋಡ, ಸುನಿತಾ ಕತ್ತಿ, ರಾಜು ವಡ್ಡರ ಮಾತನಾಡಿದರು. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಪುರಸಭೆ ಸದಸ್ಯ ಹಣಮಂತ ಬೋವಿ, ಗಣ್ಯ ವ್ಯಾಪಾರಿ ಸಂಗಣ್ಣ ಜಿಟಿಸಿ, ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ಮುಖಂಡ ರಾಮಣ್ಣ ಪೂಜಾರಿ, ನಿವೃತ್ತ ಉಪನ್ಯಾಸಕ ಎಸ್.ಎಸ್.ಹೂಗಾರ, ರೂಪಾ ದೇಸಾಯಿ, ದಾನಮ್ಮ ಶಿವಶಿಂಪಿ, ಸ್ಮಿತಾ ಶಿವಶಿಂಪಿ, ರೇಖಾ ಅಂಗಡಿ, ಮಧುರಾ ಮಕ್ತೇದಾರ ಸೇರಿದಂತೆ ಸಾವಿರಾರು ಭಕ್ತರು ದರ್ಶನ ಪಡೆದರು.

ಶನಿ ಮಹಾರಾಜರ ದರ್ಶನ ಸಾವಿರಾರು ಭಕ್ತರು

ಪ್ರತಿ ಹದಿಮೂರು ವ?ರ್ಗಳಿಗೊಮ್ಮೆ ಮಾತ್ರ ಒದಗಿಬರುವ ಅತ್ಯಂತ ಅಪರೂಪದ ಶನಿವಾರ. ಅಮಾವಾಸ್ಯೆ ಮತ್ತು ಶನಿದೇವರ ಜಯಂತಿ’ ಒಟ್ಟಿಗೆ ಬಂದ ಪವಿತ್ರ ದಿನವಾದ ಹಿನ್ನೆಲೆ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಹರಿದುಬಂದು ಶನಿ ಮಹಾರಾಜರ ದರ್ಶನ ಪಡೆದರು. ವೈಭವದ ಕಳಶ ಮೆರವಣಿಗೆ, ವಿಶೇಷ ಎಳ್ಳೆಣ್ಣೆ ಅಭಿಷೇಕ, ಹೋಮ-ಹವನಗಳು ಭಕ್ತರ ಕಣ್ಣು ತುಂಬಿದೆವು. ಖಾಸ್ಗತೇಶ್ವರ ಮಠ, ಸಾಧನಾ ಮಹಿಳಾ ಒಕ್ಕೂಟ, ಅಕ್ಕನ ಬಳಗ ಮತ್ತು ಸಾಯಿ ಸಮಿತಿ ಟ್ರಸ್ಟ್‌ನವರಿಂದ ನಡೆದ ಸುಮಧುರ ಭಜನಾ ಸೇವೆ ಧಾರ್ಮಿಕ ಕಳೆಯನ್ನು ಹೆಚ್ಚಿಸಿತು. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಯಶಸ್ವಿಯಾಗಿ ನೆರವೇರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿ
ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ