ಕನ್ನಡಪ್ರಭ ವಾರ್ತೆ ಕಲಬುರಗಿ
2014 ನ.28 ರಂದು ಸಂಪುಟ ಸಭೆ ಇಲ್ಲಿ ನಡೆದಿತ್ತು. ದಶಕದ ನಂತರ ಇದೀಗ ಮತ್ತೆ ಸಭೆ ನೆಡೆಯುತ್ತಿರೋದರಿಂದಾಗಿ ಪ್ರಮುಖ ರಸ್ತೆ, ವೃತ್ತಗಳು, ಸಭೆ ನಡೆಯುತ್ತಿರುವ ವಿಕಾಸ ಭವನದ ಸುತ್ತಮುತ್ತ ಹಾಗೂ ಸಚಿವರು ಸಂಚರಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಭರದಿಂದ ಸ್ವಚ್ಚತೆ ಕೆಲಸ ಸಾಗಿದೆ.
ಕಳೆದೊಂದು ದಶಕದಿಂದ ಡಾಂಬಾರ ಕಾಣದ ಇಲ್ಲಿನ ವಿಕಾಸ ಭವನದ ಅಂಗಳದಲ್ಲಿ ರಾತ್ರಿ ಬೆಳಗಾಗೋದ್ರೊಳಗೇ ಟಾರ್ ಸುರಿದು ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಇಡೀ ವಿಕಾಸ ಸೌಧದ ಪ್ರಾಂಗಣ ಮಿರ ಮಿರ ಮಿಂಚುತ್ತಿದೆ.ಮಂತ್ರಿ ಮಹೋದಯರೆಲ್ಲರ ವಾಹನಗಳು, ವಿವಿಧ ಇಲಾಖೆಗಳ ಮುಖ್ಯ, ಹೆಚ್ಚುವರಿ ಕಾರ್ಯದರ್ಶಿಗಳು, ಅವರ ಆಪ್ತ ಸಲಹೆಗಾರ ಅಧಿಕಾರಿಗಳು, ವಿಶೇಷ ಕರ್ತವ್ಯಾಧಿಕಾರಿಗಳು ಸೇರಿದಂತೆ 300 ಕ್ಕೂ ಹೆಚ್ಚು ವಿಐಪಿ ವಾಹನಗಳು ಅಂದು ಕಲಬುರಗಿಯ ವಿಕಾಸ ಭವನದಲ್ಲಿ ನಿಲುಗಡೆಯಾಗೋದರಿಂದ ಭವನದ ಸುತ್ತಲು ಬೆಳೆದಿದ್ದ ಪೋದೆಗಳನ್ನೆಲ್ಲ ತುಂಡರಿಸಿ ಇಡೀ ಪ್ರಾಂಗಣ ಲಕಲಕ ಮಾಡಲಾಗುತ್ತಿದೆ.
2014ರಲ್ಲೇ ಸುಣ್ಣ ಬಣ್ಣ ಕಂಡಿದ್ದ ವಿಕಾಸ ಭವನಕ್ಕೆ ಮತ್ತೆ ಬಣ್ಣ ಬಳಿಯಲಾಗುತ್ತಿದೆ. ಸಂಪುಟ ಸಭೆ ನಡೆಯುವ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿಯೂ ಆಸನ ವ್ಯವಸ್ಥೆ ಆಧುನೀಕರಣಗೊಳಿಸಲಾಗುತ್ತಿದೆ. 2014 ರ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯ ನಂತರ ಹೇಗಿತ್ತೋ ಹಾಗೆಯೇ ದಶಕ ಕಳೆದಿದ್ದ ಕಲಬುರಗಿ ವಿಕಾಸ ಭವನ ಇದೀಗ ಮತ್ತೊಂದು ಸಂಪುಟ ಸಭೆಗೆ ಸಿಂಗಾರಗೊಳ್ಳುತ್ತಿರೋದು ಇಲ್ಲಿಗೆ ಬಂದು ಹೋಗುವ ಸಾರ್ವಜನಿಕರಿಗಂತೂ ಖುಷಿ ತಂದಿದೆ.
ಸಂಪುಟ ಸಭೆ, ಸಚಿವರ ಸಂಚಾರ ದಾರಿಗಳಷ್ಟೇ ಲಕಲಕ!
ನಾವು ರಸ್ತೆ ದುರಸ್ತಿ ಮಾಡಂದ್ರೆ ದುಡ್ಡಿಲ್ಲ ಅಂತಾರೆ, ಈಗೆಲ್ಲಿಂದ ಬಂತ ಹಣ? ಸಂಪುಟ ಸಭೆಗೆ ಬಂದು 1 ದಿನದಲ್ಲಿ 2 ಅಥವಾ 3 ಗಂಟೆಗೆ ಬಂದು ಹೋಗುವವರಿಗೇ ಈ ಪರಿ ವೆಚ್ಚ ಮಾಡುತ್ತಾರೆ. ಜನ ಕೇಳಿದರೆ ಹಣವಿಲ್ಲ ಅನ್ನೋರು ಮಂತ್ರಿಗಳು ಬರ್ತಾರೆ ಅಂದ್ರೆ ರಸ್ತೆ ಸ್ವಚ್ಛ ಮಾಡ್ತಾರೆ, ಇದೇ ಪ್ರಜಾಪ್ರಭುತ್ವ, ಪ್ರಜೆಗಳಿಗಿಲ್ಲ ಕಿಮ್ಮತ್ತೆ ಇಲ್ಲ. ಅವರ ಬೇಡಿಕೆಗಳಿಗೆ ಮಾನ್ಯತೆಯೇ ಇಲ್ಲ.
2 ರಿಂದ 3 ಗಂಟೆ ಸಂಪುಟ ಸಭೆಯಲ್ಲಿ ಸಚಿವರು, ಅಧಿಕಾರಿಗಳೆಲ್ಲರೂ ವಿಕಾಸ ಭವನದ 3 ನೇ ಮಹಡಿ ಹತ್ತಿ ಇಳಿಯಲಿಕ್ಕೇ 2 ಗಂಟೆ ಬೇಕು. ಇನ್ನು ಸಭಾಂಗಣದಲ್ಲಿ 1 ಗಂಟೆ ಕುಳಿತು ಅದೇನು ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಪ್ರಗತಿ ಚಿಂತನೆ ನಡೆಸುತ್ತಾರೋ? ದಶಕದ ನಂತರ ವಿಕಾಸ ಭವನ, ಕೆಲವು ರಸ್ತೆಗಳ ಸ್ವಚ್ಚತೆಯೇ ಸಂಪುಟ ಸಭೆಯ ಲಾಭ, ಅದು ಬಿಟ್ಟರೆ ಉಳಿದೆಲ್ಲವೂ ಶೂನ್ಯ.