ದೊಡ್ಡಬಳ್ಳಾಪುರ: ಚಳವಳಿಗಳ ದಿಕ್ಕುದೆಸೆಗಳ ಕುರಿತು ಆತ್ಮಾವಲೋಕನ ಅಗತ್ಯವಾಗಿದೆ. ದಲಿತ ಸಂಘಟನೆಗಳ ಹೋರಾಟಗಳು ನೆಲದ ಸಂವೇದನೆಯನ್ನು ಪ್ರಧಾನವಾಗಿ ಪರಿಗಣಿಸಿ, ಸ್ವಾಭಿಮಾನದ ಸಂಕೇತಗಳಾಗಿ ರೂಪುಗೊಳ್ಳಬೇಕು ಎಂದು ದಲಿತ ವಿಮೋಚನಾ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮಾ.ಮುನಿರಾಜು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ಕಡುಕಷ್ಟದ ದಿನಗಳಲ್ಲೂ ಸಾಮಾಜಿಕ ಕಾಳಜಿಯ ಕಾರಣದಿಂದಾಗಿ ಚಳವಳಿಗಳಲ್ಲಿ ತೊಡಗಿಸಿಕೊಂಡ ಒಂದು ಪೀಳಿಗೆ ಸ್ವಾರ್ಥರಹಿತ, ರಾಜಿರಹಿತ ಹೋರಾಟಗಳ ಮಾದರಿಯನ್ನು ದೊಡ್ಡಬಳ್ಳಾಪುರದಲ್ಲಿ ಸೃಷ್ಟಿಸಿದ್ದರು. ಅಂತಹ ಗಟ್ಟಿತನದ ಚಳವಳಿಗಳ ಕೊರತೆ ಈಗ ಎದ್ದು ಕಾಣುತ್ತಿದೆ. ಆಳುವ ವರ್ಗ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್ ಮಾತನಾಡಿ, ಕನ್ನಡ, ದಲಿತ ಹಾಗೂ ರೈತ ಹೋರಾಟಗಳು ಒಂದೇ ಬಗೆಯ ಚಿಂತನೆಗಳನ್ನು ಪ್ರಧಾನವಾಗಿಟ್ಟುಕೊಂಡು, ಶೋಷಿತ ಹಾಗೂ ತಳಸಮುದಾಯಗಳ ಅಭ್ಯುದಯವನ್ನು ಬಯಸಿದ್ದವು. ಅವುಗಳ ವಿಘಟನೆ ಬಹುದೊಡ್ಡ ಹಿನ್ನಡೆ ಎಂದೇ ಭಾವಿಸಬೇಕು ಎಂದು ಅಭಿಪ್ರಾಯಪಟ್ಟರು.ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಒಂದು ಪೀಳಿಗೆಯನ್ನು ಪ್ರಭಾವಿಸುವ ಮಟ್ಟಿಗೆ ದೊಡ್ಡಬಳ್ಳಾಪುರದಲ್ಲಿ ಶಕ್ತವಾಗಿದ್ದ ಚಳವಳಿಗಳು, ಹೊಸ ಪೀಳಿಗೆಯ ಗುಣಾತ್ಮಕ ಚಳವಳಿಗಾರರನ್ನು ಸೃಷ್ಟಿಸುವಲ್ಲಿ ವಿಫಲವಾದಂತಿದೆ. ಸಂಘಟನೆಗಳು ಶಕ್ತಿಯುತವಾಗುವ ಜತೆಗೆ ರಾಜಕೀಯ ಶಕ್ತಿಯಾಗಿ ಮಾರ್ಪಾಟಾಗದೇ ಹೊಂದದೇ ಹೋದಲ್ಲಿ ಉದ್ದೇಶಗಳ ಸಾಫಲ್ಯ ಕಡಿಮೆ. ಚಳವಳಿಗಳು ವ್ಯಕ್ತಿ ಅಥವಾ ವರ್ಗ ಕೇಂದ್ರಿತವಾಗದೆ ವಿಷಯಾಧಾರಿತ ಮತ್ತು ಗುಣಾತ್ಮಕವಾಗಬೇಕು. ಸಾಂವಿಧಾನಿಕ ಆಶಯಗಳ ಉಳಿವಿಗಾಗಿ ದೊಡ್ಡ ಮಟ್ಟದ ಆಂದೋಲನ ಅಗತ್ಯವಾಗಿದೆ ಎಂದು ಹೇಳಿದರು.
ದಲಿತ ಮುಖಂಡ ಮುನಿಸುಬ್ಬಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಸದಸ್ಯ ಅಂಜನಮೂರ್ತಿ, ಕರವೇ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಗೌರವಾಧ್ಯಕ್ಷ ಪು.ಮಹೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು, ಕಾರ್ಮಿಕ ಘಟಕದ ಅಧ್ಯಕ್ಷ ರಾಜಘಟ್ಟ ಮಹೇಶ್, ಮುಖಂಡರಾದ ಮುನಿಯಪ್ಪ, ಗೋಪಾಲ್, ಅನ್ನಪೂರ್ಣ, ಓಬಳೇಶ್, ಮಧು, ಕನ್ನಡಪಕ್ಷದ ವೆಂಕಟೇಶ್, ಮುನಿಪಾಪಯ್ಯ ಇತರರಿದ್ದರು.
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟದಲ್ಲಿ ದಲಿತ ವಿಮೋಚನಾ ಸೇನೆಯಿಂದ ನಡೆದ ವಿಚಾರ ಮಂಥನ ಸಭೆಯನ್ನು ತ.ನ.ಪ್ರಭುದೇವ್ ಉದ್ಘಾಟಿಸಿದರು.