ದ್ವಿಚಕ್ರ ವಾಹನ ತೆಗೆದುಕೊಂಡು ಹಣ ಡ್ರಾ ಮಾಡಿ ಹೊರಗೆ ಹೋದ ಟೆಕಿ : ವಾರವಾದ್ರೂ ಪತ್ತೆ ಇಲ್ಲ

KannadaprabhaNewsNetwork |  
Published : Aug 13, 2024, 01:15 AM ISTUpdated : Aug 13, 2024, 10:34 AM IST
porn sites

ಸಾರಾಂಶ

ಆಗಸ್ಟ್‌ 4ರಂದು ಮನೆಯಿಂದ ತೆರಳಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಏಕಾಏಕಿ ನಾಪತ್ತೆಯಾಗಿರುವುದು.

 ಬೆಂಗಳೂರು :  ನಾಪತ್ತೆಯಾಗಿರುವ ಟೆಕಿ ಪತಿಯನ್ನು ಹುಡುಕಿಕೊಡುವಂತೆ ಮಹಿಳೆಯೊಬ್ಬರು ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಟಾಟಾನಗರದ 5ನೇ ಮುಖ್ಯರಸ್ತೆ ನಿವಾಸಿ ವಿಪಿನ್‌ ಗುಪ್ತಾ(37) ನಾಪತ್ತೆಯಾಗಿರುವ ಸಾಫ್ಟ್‌ವೇರ್‌ ಇಂಜಿನಿಯರ್‌. ಇವರ ಪತ್ನಿ ಶ್ರೀಪರ್ಣಾ ದತ್‌ ಎಂಬುವರು ನೀಡಿದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಪಿನ್‌ ಗುಪ್ತಾ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲಿ ಏನಿದೆ?ಲಕ್ನೋ ಮೂಲದ ವಿಪಿನ್‌ ಗುಪ್ತಾ, ಪತ್ನಿ ಶ್ರೀಪರ್ಣಾ ಹಾಗೂ ಇಬ್ಬರು ಪುತ್ರಿಯರ ಜತೆಗೆ ನಗರದ ಟಾಟಾನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ವಿಪಿನ್‌ ಗುಪ್ತಾ ಕಳೆದ ಜೂನ್‌ ತಿಂಗಳಲ್ಲಿ ಉದ್ಯೋಗ ತೊರೆದಿದ್ದರು. ಹೊಸ ಉದ್ಯೋಗಕ್ಕಾಗಿ ಹುಡುಕಾಟದಲ್ಲಿ ತೊಡಗಿದ್ದರು.

ಆ.4 ಮಧ್ಯಾಹ್ನ 12.42ಕ್ಕೆ ಮನೆಯಿಂದ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದಾರೆ. ಇದಾದ 25 ನಿಮಿಷಕ್ಕೆ ಖಾತೆಯಿಂದ 1.80 ಲಕ್ಷ ರು. ಹಣ ಡ್ರಾ ಮಾಡಿದ್ದಾರೆ. ಬಳಿಕ ಕರೆ ಮಾಡಿದರೆ ಮೊಬೈಲ್‌ ಸ್ವಿಚ್ಚ್‌ ಆಫ್‌ ಬಂದಿದೆ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಹೀಗಾಗಿ ತಮ್ಮ ಪತಿಯನ್ನು ಹುಡುಕಿ ಕೊಡಿ ಎಂದು ಶ್ರೀಪರ್ಣಾ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಪಿನ್‌ ಗುಪ್ತಾ ಪತ್ತೆಗೆ ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.

2ನೇ ಬಾರಿ ವಿಪಿನ್‌ ನಾಪತ್ತೆ !

ಟೆಕ್ಕಿ ವಿಪಿನ್‌ ಗುಪ್ತಾ ಅವರು ಎರಡನೇ ಬಾರಿಗೆ ನಾಪತ್ತೆಯಾಗಿದ್ದಾರೆ. 8 ತಿಂಗಳ ಹಿಂದೆ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಒಂಟಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬಳಿಕ ಗೋವಾದಲ್ಲಿ ಅವರನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದು ಕುಟುಂಬಕ್ಕೆ ಒಪ್ಪಿಸಲಾಗಿತ್ತು. ಇದೀಗ ಮತ್ತೊಮ್ಮೆ ವಿಪಿನ್‌ ಸಹಕಾರ ನಗರದ ಬ್ಯಾಂಕ್‌ನ ತಮ್ಮ ಖಾತೆಯಿಂದ 1.80 ಲಕ್ಷ ರು. ಹಣ ಡ್ರಾ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈಗಾಗಲೇ ಪೊಲೀಸರ ವಿಶೇಷ ತಂಡ ವಿಪಿನ್‌ ಗುಪ್ತಾ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದು, ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜಿತ್‌ ಹೇಳಿದ್ದಾರೆ.

ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ:

‘ಎಕ್ಸ್‌’ ಖಾತೆಯಲ್ಲಿ ಮಹಿಳೆ ಆರೋಪ

ಪತಿ ನಾಪತ್ತೆ ದಿನವೇ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾಗ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ. ಕಾಡಿಬೇಡಿದ ಬಳಿಕ ಆ.6ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಈವರೆಗೂ ಪತಿ ಪತ್ತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಮಹಿಳೆ ಎಕ್ಸ್‌ ಖಾತೆಯಲ್ಲಿ ಪೊಲೀಸರ ವಿರುದ್ಧವೇ ಆರೋಪಿಸಿದ್ದಾರೆ.

ನನಗೆ 5 ತಿಂಗಳ ಮತ್ತು 14 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಮಗೆ ಬೆಂಗಳೂರಿನಲ್ಲಿ ಯಾವುದೇ ಸಂಬಂಧಿಕರಿಲ್ಲ. ನಮ್ಮದು ಮಧ್ಯಮ ವರ್ಗದ ಚಿಕ್ಕ ಕುಟುಂಬ. ಸಾಂಸಾರಿಕ ಜೀವನ ಉತ್ತಮವಾಗಿದೆ. ಆರ್ಥಿಕವಾಗಿ ಯಾವುದೇ ಸಮಸ್ಯೆಯಿಲ್ಲ. ಇಬ್ಬರು ಮಕ್ಕಳೊಂದಿಗೆ ನಾವು ಸುಖವಾಗಿದ್ದೆವು. ಆ.5ರಂದು ನಮ್ಮ ವಿವಾಹ ವಾರ್ಷಿಕೋತ್ಸವ ಇತ್ತು. ಪತಿ ವಿಪಿನ್‌ ನನಗೆ ಐಫೋನ್‌ ಗಿಫ್ಟ್‌ ಮಾಡಲು ಉತ್ಸುಕರಾಗಿದ್ದರು. ಆ.8ರಂದು ಕುಟುಂಬ ಸಮೇತ ಕಳಸ, ಹೊರನಾಡು, ಶೃಂಗೇರಿ, ಕುಕ್ಕೆ, ಧರ್ಮಸ್ಥಳಕ್ಕೆ ತೆರಳಲು ಪ್ಲ್ಯಾನ್‌ ಮಾಡಿದ್ದೆವು. ಆದರೆ, ಆ.4ರಂದು ಪತಿ ವಿಪಿನ್‌ ಏಕಾಏಕಿ ನಾಪತ್ತೆಯಾಗಿದ್ದಾರೆ. ಅವರ ಜೀವದ ಬಗ್ಗೆ ಆತಂಕವಾಗಿದೆ. ದಯವಿಟ್ಟು ಪತಿ ವಿಪಿನ್‌ ಅವರನ್ನು ಹುಡುಕಿ ಕೊಡಿ ಎಂದು ಎಕ್ಸ್‌ ಖಾತೆಯಲ್ಲಿ ಶ್ರೀಪರ್ಣಾ ದತ್‌ ಅವರು ನಗರ ಪೊಲೀಸ್‌ ಆಯುಕ್ತ, ಮುಖ್ಯಮಂತ್ರಿ ಹಾಗೂ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

5 ಲಕ್ಷ ರು. ಕೊಡುವಂತೆ ಬ್ಲ್ಯಾಕ್‌ ಮೇಲ್‌:

ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ನನಗೆ ಮೊಬೈಲ್‌ಗೆ ಬ್ಲ್ಯಾಕ್‌ ಮೇಲ್‌ ಸಂದೇಶ ಬರುತ್ತಿವೆ. 5 ಲಕ್ಷ ರು. ಹಣ ವರ್ಗಾವಣೆ ಮಾಡುವಂತೆ ಅಪರಿಚಿತರು ಕೇಳುತ್ತಿದ್ದಾರೆ. ಹಣ ಕೊಡದಿದ್ದಲ್ಲಿ ನಿನ್ನ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಆ ಅಪರಿಚಿತರು ನನ್ನ ಮೇಲೆ ನಿಗಾವಹಿಸಿದ್ದಾರೆ ಎಂದು ಶ್ರೀಪರ್ಣಾ ದತ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಕೆಲವು ವಾಟ್ಸಾಪ್‌ ಚಾಟಿಂಗ್‌ನ ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ಸ್ವತಂತ್ರಗೊಳಿಸುವಲ್ಲಿ ಕಾಂಗ್ರೆಸ್‌ ಪಾತ್ರ ಮಹತ್ವದ್ದು: ಶಾಸಕಿ ಅನ್ನಪೂರ್ಣ ತುಕಾರಾಂ
ಜ. 2 ರಿಂದ ಏಪ್ರಿಲ್ 2ರವರೆಗೆ ಮಧ್ಯಸ್ಥಿಕೆ ಅಭಿಯಾನ