ನೂರು ಸದಸ್ಯರಿಂದ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಇಂದು ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ದತ್ತಿ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋಟಿ ರೂ. ವರೆಗೂ ದತ್ತಿ ಇರಿಸಿದ್ದಾರೆ. ನಾಡಿನ ಅತ್ಯುತ್ತಮ ಕೃತಿಗಳನ್ನು ಪರಿಚಯಿಸಿದೆ. ನಾಲ್ವಡಿ ಮತ್ತು ವಿಶ್ವೇಶ್ವರಯ್ಯ ಅವರು ಕಟ್ಟಿರುವ ಸಂಸ್ಥೆಗೆ ಎಂದಿಗೂ ಸೋಲಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸದಾ ಸ್ಮರಣೀಯರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ 112 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕೃತರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ರ್ಯಾಂಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂರು ಸದಸ್ಯರಿಂದ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಇಂದು ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ದತ್ತಿ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋಟಿ ರೂ. ವರೆಗೂ ದತ್ತಿ ಇರಿಸಿದ್ದಾರೆ. ನಾಡಿನ ಅತ್ಯುತ್ತಮ ಕೃತಿಗಳನ್ನು ಪರಿಚಯಿಸಿದೆ. ನಾಲ್ವಡಿ ಮತ್ತು ವಿಶ್ವೇಶ್ವರಯ್ಯ ಅವರು ಕಟ್ಟಿರುವ ಸಂಸ್ಥೆಗೆ ಎಂದಿಗೂ ಸೋಲಿಲ್ಲ ಎಂದರು.
ಕಸಾಪ ಕನ್ನಡ ಸೇವೆಯ ಜೊತೆಗೆ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಇಂದು ಜಗತ್ತಿನಲ್ಲಿ ಯಾರು ಏನೂ ಬೇಕಾದರೂ ಆಗಬಹುದು. ಆದರೆ, ಮನುಷ್ಯ ಆಗುವುದು ಬಹಳ ಮುಖ್ಯ ಎಂದರು.
ವಿದ್ಯಾರ್ಥಿಗಳು ಕೌಶಲ್ಯ ವೃದ್ದಿಸಿಕೊಳ್ಳಬೇಕು. ಡಿಜಿಟಲ್ ಯುಗದಲ್ಲಿ ಕೌಶಲ್ಯ ಬಹಳ ಮುಖ್ಯವಾಗಿದ್ದು, ಅದಕ್ಕೆ ತಕ್ಕಂತೆ ಡಿಜಿಟಲ್ ಜ್ಞಾನ ವೃದ್ಧಿಸಿಕೊಳ್ಳಿ ಪ್ರಮುಖವಾಗಿ ಸಮಯ ಪಾಲನೆ ಮಾಡಿ ಎಲ್ಲರಿಗಿಂತಲೂ ವಿಭಿನ್ನವಾಗಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಉದಯ ಕುಮಾರ್ ಮಾತನಾಡಿ, ಸೇವಾ ಮತ್ತು ಶಿಕ್ಷಣ ಕ್ಷೇತ್ರವನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿದ್ದಾರೆ. ಇದರಿಂದ ಶಿಕ್ಷಣ ಇಲಾಖೆಗೆ ಹೆಮ್ಮೆ ಆಗಿದೆ. ಮಕ್ಕಳ ಸಾಧನೆ ಗುರುತಿಸಿದರೆ ಅವರ ಸಾಧನೆಗೆ ಸಾಥ್ ನೀಡಿದಂತೆ ಕಾಣುತ್ತದೆ. ಮೈಸೂರು ಜಿಲ್ಲೆ 21 ಸಾವಿರ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಐದು ನೂರಕ್ಕೂ ಹೆಚ್ಚು ಮಂದಿ 600ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಜಿಲ್ಲೆ ಒಟ್ಟಾರೆ ಉತ್ತಮ ಫಲತಾಂಶ ಗಳಿಸಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಶ್ರಮ ವಹಿಸಲಾಗುತ್ತದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ. ಆದರೆ, 7.8.9 ನೇ ತರಗತಿ ಮಕ್ಕಳಿಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಲೆಗಳಲ್ಲಿ ಕನ್ನಡ ಕುರಿತಂತೆವಿದ್ಯಾರ್ಥಿಗಳಿಗೂ ಸಂವಾದ, ವಿಶೇಷ ಯೋಜನೆಗಳನ್ನು ಆಯೋಜಿಸಿ ಎಂದು ತಿಳಿಸಿದರು.
ರಾಜ್ಯ ರಾಜ್ಯೋತ್ಸವ ಪುರಸ್ಕೃತರಾದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಂದೀಧ್ವಜ ರೂವಾರಿ ಉಡಿಗಾಲ ಮಹದೇವಪ್ಪ, ರಂಗಕರ್ಮಿ ಮೈಮ್ ರಮೇಶ್, ಅಂತಾರಾಷ್ಟ್ರೀಯ ಅಥ್ಲೆಟ್ ಎಂ.ಯೋಗೇಂದ್ರ. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದ ಕೆಪಿಎಸ್ ಇಲವಾಲದ ಆರ್. ಮಾಧುರಿ, ವಿಜಯವಿಠಲ ವಿದ್ಯಾಶಾಲೆಯ ಮನಸ್ವಿನಿ ಪ್ರದೀಪ್, ಕೆ.ಆರ್. ನಗರ ಬಿ.ಎಸ್. ಮಾದಪ್ಪ ಸ್ಮಾಕ ವಿದ್ಯಾಸಂಸ್ಥೆಯ ಡಿ.ಜಿ.ವಿನುತ, ಪಿಎಂಸಿ ಆದರ್ಶ ವಿದ್ಯಾಲಯದ ಎಂ.ಎಸ್.ಲಕ್ಷಣ್ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿರುವ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದ ಮಹಮದ್ ಮೆಹರಾನ್ , ಹುಣಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಕೆ.ಎಲ್.ಶ್ರಾವ್ಯ, ಮಹಾರಾಣಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಉಮ್ಮೆ ಕುಲ್‌ಸುಮ್, ವಾಣಿಜ್ಯ ವಿಭಾಗದ ಗುಲ್ಸುಮ್, ಕೆ.ಆರ್. ನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಎಸ್.ತನ್ಮಯಿ ಅವರನ್ನು ಅಭಿನಂದಿಸಲಾಯಿತು.
ಹೇಮಲತಾ ಕುಮಾರಸ್ವಾಮಿ ಪ್ರಾರ್ಥಿಸಿದರು. ಮಹಾರತ್ನ ಟ್ರಸ್ಟ್ ಮತ್ತು ಲೀಲಾವತಿ ತಂಡದವರು ನಾಡಗೀತೆ ಹಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮ.ನ. ಲತಾ ಮೋಹನ್ ಸ್ವಾಗತಿಸಿದರು. ಎನ್. ಅನಂತ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ ವಂದಿಸಿದರು. ಕಾರ್ಯದರ್ಶಿ ಜಯಪ್ಪ ಹೊನ್ನಾಳಿ, ಕೋಶಾಧ್ಯಕ್ಷ ಜಿ. ಪ್ರಕಾಶ್, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ರಂಗನಾಥ್ ಮೈಸೂರು, ಎಂ.ವಿ. ನಾಗೇಂದ್ರ ಬಾಬು ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.