ಬೆಂಗಳೂರು ದಕ್ಷಿಣ ಜಿಲ್ಲೆಯ ದೀಪ ಲಿಂ.ನಿರ್ವಾಣ ಶ್ರೀ

KannadaprabhaNewsNetwork |  
Published : Jul 04, 2026, 01:30 AM IST
ಕೆ ಕೆ ಪಿ ಸುದ್ದಿ 01: ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮ ಪೂಜ್ಯ ಶ್ರೀ ಮುಮ್ಮಡಿ ನಿರ್ವಣಾ ಮಹಾಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸುತ್ತೂರು ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಡಾ. ಚನ್ನಬಸವ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು.  | Kannada Prabha

ಸಾರಾಂಶ

ಕನಕಪುರ: ಪರಮಪೂಜ್ಯ ಶ್ರೀ. ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ದೊಡ್ಡ ದೀಪವಾಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಮರಿಸಿದರು

ಕನಕಪುರ: ಪರಮಪೂಜ್ಯ ಶ್ರೀ. ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ದೊಡ್ಡ ದೀಪವಾಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಮರಿಸಿದರು.

ದೇಗುಲ ಮಠದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲಿಂಗೈಕ್ಯ ಮುಮ್ಮಡಿ ನಿರ್ವಾಣ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗುರುವಿನ ಪಾದಗಳಿಗೆ ಹಣೆ ಇಟ್ಟರೆ ನಮಗೆ ಜ್ಞಾನ ಹೆಚ್ಚುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇದು ಕಣ್ಣೀರು ಹಾಕುವ ದಿನವಲ್ಲ, ಶ್ರೀಗಳ ಕಾರ್ಯವನ್ನ ಮುಂದುವರಿಸುವ ದಿನ. ಶ್ರೀಗಳು ಇಲ್ಲಿ ಸೇತುವೆ ನಿರ್ಮಿಸಬೇಕು ಎಂದು ಬಹಳಷ್ಟು ಬಾರಿ ನನಗೆ ಹೇಳಿದ್ದರು. ಇಂದು ಶ್ರೀಗಳ ಚಿಂತನೆಯಂತೆ ಸೇತುವೆ ಉದ್ಘಾಟಿಸಿರುವುದು ನನ್ನ ಭಾಗ್ಯ. ಈ ಸೇತುವೆಗೆ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯ ಹೆಸರನ್ನೇ ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.

ನನಗೂ ಸಮಾಜಕ್ಕೂ ಬಾಂಧವ್ಯ:

ನಮ್ಮ ವೀರಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ ಎಂದು ಮಾರ್ಗದರ್ಶನ ನೀಡಿದ್ದಾರೆ. ನನಗೂ ಶಿವನ ಪಾದಕ್ಕೂ ಏನು ಸಂಬಂಧವೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಿಂದಿನ ತಲೆಮಾರುಗಳಿಂದ ಯಾರೇ ಹುಟ್ಟಿದರೂ ಕೆಂಪೇಗೌಡ ಎಂದು ಹೆಸರಿಡುವ ಪ್ರವೃತ್ತಿ ಇದೆ. ನಮ್ಮ ತಾಯಿ ಶಿವಾಲ್ದಪ್ಪ ಬೆಟ್ಟದ ಶಿವನಿಗೆ ಹರಕೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಶ್ರೀ ದೇಗುಲ ಮಠದ ಸ್ವಾಮೀಜಿಗಳ ಬಳಿ ಆಶೀರ್ವಾದ ಪಡೆದಿದ್ದರು. ನಮ್ಮ ಮನೆಯಲ್ಲಿ ಏನೇ ಕೆಲಸವಾಗಬೇಕಾದರೂ ಈ ಮಠಕ್ಕೆ ಬಂದು ಸ್ವಾಮೀಜಿಗಳಿಂದ ಮಾರ್ಗದರ್ಶನ ಪಡೆಯುತ್ತಿದ್ದರು. ನಾನು ಕೂಡ ಧರ್ಮದಿಂದ ಏಳಬೇಕು, ಧರ್ಮದಿಂದ ಬಾಳಬೇಕು, ಧರ್ಮದಿಂದ ಆಳಬೇಕು, ಧರ್ಮದಿಂದ ತಾಳ್ಮೆಯಿಂದರಬೇಕು ಎಂದು ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಹೈದರಾಬಾದ್ ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದಿದೆ. ಅಜ್ಜಯ್ಯ ಅವರು ಸ್ಥಾಪಿಸಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ಪದವಿ ಓದಿದೆ. ಹೀಗಾಗಿ ನನಗೂ ಈ ಭವ್ಯ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದ್ದುದರಿಂದ ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ನಾನು ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಸಾಕಷ್ಟು ಚರ್ಚೆಯಾಯಿತು. ಅನೇಕ ಗಣ್ಯರು ನನ್ನನ್ನು ವಿವಿಧ ರೀತಿಯಲ್ಲಿ ಕೇಳಿದರು. ನಾನು ಅವರಿಗೆ ಇದು ನನ್ನ ನಂಬಿಕೆ ಎಂದು ಹೇಳಿದೆ. ನಮ್ಮ ಆರಾಧ್ಯ ದೈವ, ನಂಬಿಕೆ, ಮಾರ್ಗದರ್ಶನ ಕೊಟ್ಟವರನ್ನು, ಕಷ್ಟಕಾಲದಲ್ಲಿ ನಿಂತವರನ್ನು ನಾವು ಸ್ಮರಿಸಬೇಕು. ಈ ವಿಚಾರ ನನಗೆ, ಯಡಿಯೂರಪ್ಪನವರಿಗೆ, ಸೋಮಣ್ಣ ಅವರಿಗೆ ಗೊತ್ತು, ಬೇರೆಯವರಿಗೆ ಇದು ಗೊತ್ತಿಲ್ಲ ಎಂದು ತಿಳಿಸಿದರು.

ಮುಮ್ಮಡಿ ಶ್ರೀಗಳು ಸಮಾಜಕ್ಕೆ ಮುಡಿಪಾಗಿದ್ದರು:

ಇಂದು ಸ್ವಾಮೀಜಿಗಳು ನನ್ನ ಕೈನಿಂದ ಒಂದು ಪುಸ್ತಕ ಬಿಡುಗಡೆ ಮಾಡಿಸಿದರು. ಅದರಲ್ಲಿ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥ ಮಿದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ ತನ್ನ ಸ್ವಂತಕ್ಕಿಂದ ಬೇರೆಯವರಿಗೆ ಹಣ್ಣು, ನೆರಳು ಕೊಟ್ಟು ಉಪಕಾರ ಮಾಡುತ್ತದೆ. ಅದರಂತೆ ನದಿ ಕೂಡ ತನ್ನ ಸ್ವಂತಕ್ಕಿಂತ ಬೇರೆ ಪ್ರಾಣಿಗಳು, ಜೀವಿಗಳಿಗೆ ನೀರು ಒದಗಿಸುತ್ತದೆ. ಹಸು ಕೂಡ ನಮಗೆ ಹಾಲು ಕೊಟ್ಟು, ವ್ಯವಸಾಯಕ್ಕೆ ಗೊಬ್ಬರ ಕೊಟ್ಟು ನೆರವು ನೀಡುತ್ತದೆ. ಅದೇ ರೀತಿ ನಮ್ಮ ಶರೀರ ಕೂಡ ಸಮಾಜದಲ್ಲಿ ಪರೋಪಕಾರಕ್ಕೆ ಸೀಮಿತವಾದದ್ದು ಎಂದು ಈ ಶ್ಲೋಕದ ಅರ್ಥ. ಅದೇ ರೀತಿ ನಮ್ಮ ಮುಮ್ಮಡಿ ಶ್ರೀಗಳು ತಮ್ಮನ್ನು ತಾವು ಸಮಾಜಕ್ಕೆ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.

ನಾನು ಸಿಎಂ ಆಗಲೆಂದು ಹರಸಿದ್ದರು:

ನಾನು ಕಳೆದ 45 ವರ್ಷಗಳಿಂದ ಇಲ್ಲಿಗೆ ಬಂದಾಗೆಲ್ಲಾ ಎಷ್ಟೇ ಒತ್ತಡ, ಕಷ್ಟವಿದ್ದರೂ ನನ್ನನ್ನು ಕುಟುಂಬದ ಸದಸ್ಯನಂತೆ ನನಗೆ ಆಶೀರ್ವಾದ ಮಾಡಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ನಾನು ಚುನಾವಣೆಯಲ್ಲಿ ಅರ್ಜಿ ಹಾಕುವಾಗ ಅವರು ಹಾಸಿಗೆ ಹಿಡಿದಿದ್ದರು. ಆಗ ಅವರನ್ನು ಭೇಟಿ ಮಾಡಿದಾಗ, ನೀವು ಮುಖ್ಯಮಂತ್ರಿಯಾಗಬೇಕು ಎಂಬುದೇ ನಮ್ಮ ಆಸೆ ಎಂದು ಚುನಾವಣೆಗೆ ಹಣ ಕೊಟ್ಟರು, ಇಂದು ನನಗೆ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ಮಠದ ಭಕ್ತನಾಗಿ ಮುಂದೆ ನಡೆಯಬೇಕಾದ ಕಾರ್ಯಗಳ ಹೊರೆಯನ್ನು ನನಗೆ ಹೊರಿಸಿದ್ದು ಮನೆ ಹುಷಾರು, ಮಠ ಹುಷಾರು ಎಂದು ನಮ್ಮ ಹಿರಿಯರು ಹೇಳಿದಂತೆ ನನ್ನ ಮನೆಯನ್ನು ಕಾಪಾಡಿಕೊಳ್ಳುವಂತೆ ಈ ಮಠವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸುತ್ತೂರು ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಡಾ. ಚನ್ನಬಸವ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ವಿ.ಸೋಮಣ್ಣ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಗಣೇಶ್ ಪ್ರಸಾದ್, ಶಿವಗಂಗಾ, ಎಂಎಲ್ಸಿ ಎಸ್.ರವಿ, ಮಾಜಿ ಶಾಸಕ ಅನ್ನದಾನಿ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ, ಮುಖಂಡರಾದ ರುದ್ರೇಶ್, ಜಗನ್ನಾಥ್ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 0101):

ದೇಗುಲಮಠದ ಲಿಂಗೈಕ್ಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಪುಣ್ಯಸ್ಮರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸುತ್ತೂರು ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಡಾ. ಚನ್ನಬಸವ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಸೋಮಣ್ಣ ಇತರರು ಭಾಗವಹಿಸಿದ್ದರು.

ಕೆ ಕೆ ಪಿ ಸುದ್ದಿ 1(2) :ಶ್ರೀ ಮುಮ್ಮಡಿ ನಿರ್ವಣಾ ಮಹಾಸ್ವಾಮಿಗಳ ಸ್ಮರಣಾರ್ಥ ಸೇತುವೆ ಉದ್ಘಾಟಿಸಿದ ಸಿ ಎಂ ಡಿಕೆಶಿ

ಕೆ ಕೆ ಪಿ ಸುದ್ದಿ01 (03) ಪರಮ ಪೂಜ್ಯ ಲಿಂಗೈಕ್ಯ ಶ್ರೀ ನಿರ್ವಣಾ ಮಹಾಸ್ವಾಮಿಗಳ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸವವಲತ್ತುಗಳನ್ನು ಶ್ರಮಿಕ ವರ್ಗದವರು ಸದ್ಭಳಕೆ ಮಾಡಬೇಕು: ಡಾ.ಕೆ.ಪಿ.ಅಂಶುಮಂತ್
ಡೇರಿ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಿ: ಬಮೂಲ್‌ ನಿರ್ದೇಶಕ