ಕನಕಪುರ: ಶ್ರೀಮಠದ ಆವರಣದಲ್ಲಿ ಹಿಮ್ಮಡಿ ನಿರ್ವಾಣ ಸ್ವಾಮೀಜಿಗಳ ಹಾಗೂ ಮುಮ್ಮಡಿ ಮಹಾಲಿಂಗ ಸ್ವಾಮೀಜಿಗಳ ಪಕ್ಕದಲ್ಲಿಯೇ ಇರುವ ಲಿಂಗೈಕ್ಯ ಶ್ರೀಗಳ ಗದ್ದುಗೆ ಬಳಿ ಬೆಳಗಿನ ಜಾವ 4 ಗಂಟೆಗೆ ಶ್ರೀ ಮಠದ ಕಿರಿಯ ಚನ್ನಬಸವ ಸ್ವಾಮೀಜಿ ಹಲವು ಮಠಾಧೀಶರ ಸಮ್ಮುಖದಲ್ಲಿ ಮಹಾರುದ್ರಾಭಿಷೇಕದೊಂದಿಗೆ ಆರಂಭಿಸಿ ಇಷ್ಟಲಿಂಗ ಪೂಜೆ ನೆರವೇರಿಸಿ ಧಾರ್ಮಿಕ ಪೂಜಾ ವಿಧಾನಗಳಿಗೆ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಸಂಜೆ 5 ಗಂಟೆಯವರೆಗೂ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಗೀತ ನಮನ, ಸಂಜೆ 5 ಗಂಟೆಯಿಂದ ಅಮೃತಾ ನಾಯ್ಡು ಮತ್ತು ತಂಡದವರಿಂದ ಭೂಕೈಲಾಸ ಹರಿಕಥೆ ನಡೆಯಿತು. ಸಂಜೆ 6- 7ರವರೆಗೆ ಬೆಂಗಳೂರಿನ ಗ್ರಾಂಡ್ ಸಿತಾರ್ ಸಿಂಘನಿ ತಂಡದವರಿಂದ ನಾದ ಸ್ವರಾಂಜಲಿ ಹಾಗೂ ಸಂಜೆ 7 -8.30 ರವರೆಗೆ ಪಶ್ಚಿಮ ಬಂಗಾಳದ ರೈಬೋ ನೃತ್ಯ ತಂಡದವರಿಂದ ನೃತ್ಯ ನಮನ ಹಾಗೂ ರಾತ್ರಿ 8.30ರಿಂದ ಮೈಸೂರಿನ ಬಿದಿರು ಥಿಯೇಟರ್ ವತಿಯಿಂದ ಉರಿ ಚಮ್ಮಾಳಿಗೆ ಎಂಬ ಮಹದೇಶ್ವರ ನೃತ್ಯ ರೂಪಕ ನಡೆಯಿತು.
ಬೆಳಿಗ್ಗೆಯಿಂದಲೇ ಶ್ರೀ ಮಠಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ಪೂಜ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದು ಧನ್ಯರಾದರು. 25 ಸಾವಿರಕ್ಕೂ ಹೆಚ್ಚು ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರಿ ವೃಷಬೇಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಉಪಸ್ಥಿತರಿದ್ದು ಶ್ರೀಗಳ ಗದ್ದುಗೆಗೆ ಪುಷ್ಪನಮನ ಸಲ್ಲಿಸಿದರು .
ಕನಕಪುರ ದೇಗುಲ ಮಠದ ಶ್ರೀಗಳ ಗದ್ದುಗೆಗೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರಿ ವೃಷಬೇಂದ್ರ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿ ಗಳು, ಗಣ್ಯರು ಪುಷ್ಪ ನಮನ ಸಲ್ಲಿಸಿದರು.