ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಮಠಾಧೀಶರು ಸಹಕರಿಸಿ

KannadaprabhaNewsNetwork | Published : Jul 2, 2025 12:21 AM
ಪೋಟೋ, 1ಎಚ್‌ಎಸ್‌ಡಿ2: ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಲಿಂಗಾಯತ ಮಠಾಧೀಶರ ಸಮಾವೇಶದಲ್ಲಿ ಸೆ. 1ರಿಂದ ನಡೆಯಲಿರುವ ಬಸವ ಸಂಸ್ಕೃತಿ  ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾದ ಪ್ರತಿಯೊಬ್ಬ ಸ್ವಾಮೀಜಿ ಪ್ರತಿಜ್ಞೆ ಮಾಡಬೇಕೆಂದು ಗದುಗಿನ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. | Kannada Prabha

ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಲಿಂಗಾಯತ ಮಠಾಧೀಶರ ಸಮಾವೇಶದಲ್ಲಿ ಗದುಗಿನ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮನುಷ್ಯ ಈ ಲೋಕಕ್ಕೆ ಬಂದಿದ್ದು ಕೇವಲ ಉಂಡುಟ್ಟು ಬದುಕಲಿಕ್ಕಾಗಿ ಅಲ್ಲ ಬದಲಿಗೆ ಅಧ್ಯಾತ್ಮದ ಅನುಭವವನ್ನು ಅನುಭವಿಸಲಿಕ್ಕೆ. ಅಂತಹ ಅನುಭವಗಳನ್ನು ಪಡೆದ ನಾವುಗಳು ಅದನ್ನು ಸಮಾಜಕ್ಕೂ ಹಂಚಬೇಕಾಗಿರುವುದು ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಮೇಲಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಲಿಂಗಾಯತ ಮಠಾಧೀಶರ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿ, ಸೆ.1 ರಿಂದ ಅ.1ರವರೆಗೆ 30 ದಿನಗಳ ಕಾಲ ಪ್ರತಿ ದಿನ ಒಂದೊಂದು ಜಿಲ್ಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಬೇಕು ಅಭಿಯಾನದಲ್ಲಿ ಬಸವಾದಿ ಶರಣರ ಭಿತ್ತಿಚಿತ್ರಗಳಿರುವ ಬಸವ ರಥದ ಮೆರವಣಿಗೆ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಜತೆ ಸಂವಾದ, ಪಾದಯಾತ್ರೆ, ಬಹಿರಂಗ ಸಭೆ, ವಚನ ಸಂಗೀತ, ಒಬ್ಬ ಉಪನ್ಯಾಸಕರು ಹಾಗೂ ಸ್ವಾಮೀಜಿಯವರ ಆಶೀರ್ವಚನ ನಡೆಸಬೇಕು ಎಂದರು.

ಈ ಕಾರ್ಯಕ್ರಮದಲ್ಲೇ ಮಠಾಧೀಶರಾದ ನಾವು ತನು-ಮನ-ಧನಗಳನ್ನು ಅರ್ಪಿಸಿ ಕಾರ್ಯೋನ್ಮುಖರಾಗಬೇಕು. ಆಯಾಜಿಲ್ಲೆಯ ಉಸ್ತುವಾರಿಯನ್ನು ಆಯಾ ಜಿಲ್ಲೆಯ ಸ್ವಾಮಿಗಳು ವಹಿಸಿಕೊಂಡು ಅಭಿಯಾನದ ಸಂಪೂರ್ಣ ಆಗುಹೋಗುಗಳನ್ನು ನಿಭಾಯಿಸುವ ಕಾರ್ಯವಾಗಬೇಕು. ಜತೆಗೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ನಿಗಾವಹಿಸಬೇಕು. ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗಮನಹರಿಸಬೇಕು ಎಂದರು.

ಗದಗಿನ ತೋಂಟದಾರ್ಯ ಸಿದ್ಧರಾಮ ಸ್ವಾಮೀಜಿ, ಮಾತನಾಡಿ ಮಠಾಧೀಶರು ಒಗ್ಗಟ್ಟಾಗಿ, ಒಟ್ಟಾಗಿ ಸೇರಿ ಮಾಡಬೇಕಾದ ಕೆಲಸ ತುಂಬಾ ಇವೆ. ನಾವು ನಮ್ಮ ಧರ್ಮದ ಅಸ್ಮಿತೆಯನ್ನು ಕಾಪಾಡಲು ಪಣತೊಡಬೇಕಿದೆ. ಬೇರೆ ಧರ್ಮಗಳಿಂದಾಗುವ ಅನ್ಯಾಯಗಳ ವಿರುದ್ಧ ನಾವು ತಕ್ಕ ಉತ್ತರವನ್ನು ನೀಡಲೇಬೇಕು. ಮಠಾಧೀಶರೆಲ್ಲಾ ಸೇರಿಕೊಂಡು ಏನಾದರೂ ಉತ್ತಮ ಕಾರ್ಯವನ್ನು ಮಾಡಲು ಪಣತೊಟ್ಟು ನಿಂತರೆ ಎಂತಹ ಸಂದರ್ಭವನ್ನೂ ಎದುರಿಸಿಕೊಂಡು ಮುನ್ನುಗ್ಗುವ ಆತ್ಮಸ್ಥೈರ್ಯ ಬರಲಿದೆ. ಇದರ ಸದ್ಬಳಕೆಯನ್ನು ಪಡೆದುಕೊಂಡು ಈ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟ ದೇವರು ಮಾತನಾಡಿ, ಭಾರತದ ಪ್ರಧಾನ ಮಂತ್ರಿ ಬಸವಣ್ಣ ಭಾರತದ ರಾಷ್ಟ್ರೀಯ ನಾಯಕ ಎಂದು ಘೋಷಿಸುವ ಕಾಲ ಬಹಳ ದೂರವಿಲ್ಲ. ಹಿಂದೆ ಒಂದು ಕಾಲದಲ್ಲಿ ಬಸವಣ್ಣನವರ ಹೆಸರನ್ನೇ ಹೇಳದ ಜನ ಈಗ ಅವರ ಭಾವಚಿತ್ರವನ್ನು ಇಟ್ಟು ತಮ್ಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಮುಂದೆ ಬಸವಣ್ಣನವರೇ ಧರ್ಮಗುರು ಎಂಬ ಕಾಲ ಬಂದೇ ಬರುತ್ತದೆ. ನಾವು ನೋಡದಿದ್ದರೂ ನಮ್ಮ ಮಕ್ಕಳಾದರೂ ನೋಡುತ್ತಾರೆ. ಜಾತಿಯನ್ನಿಡಿದು ಹೋಗದೆ ಲಿಂಗಾಯತರೆಲ್ಲ ಒಂದೇ, ಲಿಂಗಾಯತ ಮಠಾಧೀಶರೆಲ್ಲಾ ಒಂದೇ ಎಂಬ ಆಚರಣೆ ಬರಬೇಕು. ಜಾತಿ ಗುರುಗಳು ಜಾತಿಗೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.

ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಹಿಂದೆ ಧಾರವಾಡದ ಮುರುಘಾ ಸ್ವಾಮಿಗಳನ್ನು ಒಂದು ಗಣಪತಿ ದೇವಸ್ಥಾನದ ಉದ್ಘಾಟನೆಗೆ ಕರೆದು ಅವರಿಂದಲೇ ಆ ದೇವಾಲಯದ ಉದ್ಘಾಟನೆ ಮಾಡಿ ನಂತರ ಅವರನ್ನೇ ಗರ್ಭಗುಡಿಯೊಳಗೆ ಬಿಡಲಿಲ್ಲ. ಇದರಿಂದ ನಾವು ಲಿಂಗಾಯತರಾದವರು ನಮ್ಮ ಧರ್ಮದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೋರಾಡಬೇಕಿದೆ. ಬಸವಣ್ಣನವರು ನಮ್ಮನ್ನು ಮೇಲಕ್ಕೆ ಎತ್ತಿದವರು. ಆದರೆ ಇಂದು ನಮ್ಮತನವನ್ನು ಬಿಟ್ಟು ಬೇರೊಬ್ಬರ ಬಳಿ ಹೊರಟಿದ್ದೇವೆ. ಈ ಕಾರ್ಯಗಳನ್ನೆಲ್ಲ ಸಂಘಟನೆಗಳು ಮಾಡಬೇಕು. ಧರ್ಮದ ಬೆಳವಣಿಗೆಗೆ ಸಂಘಟನೆಗಳ ಪಾತ್ರ ಬಹು ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಹಂದಿಗುಂದ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಶಿವಮೊಗ್ಗ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸಮಾವೇಶ ಉದ್ಘಾಟಿಸಿದರು. ಚಿತ್ರದುರ್ಗದ ಭೋವಿ ಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವ ಮಾದಾರ ಸ್ವಾಮೀಜಿ, ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ, ಬೀದರನ ಅಕ್ಕ ಗಂಗಾಂಬಿಕೆ, ನಿಡಸೋಸಿ ಸ್ವಾಮೀಜಿ, ಶರತ್ಚಂದ್ರ ಸ್ವಾಮೀಜಿ, ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಶುಭಾಶಯದ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೆ ಲಿಂಗಾಯತ ಪರ ಮಠಾಧೀಶರು ಭಾಗವಹಿಸಿ ತಮ್ಮ ತಮ್ಮ ಭಾಗದಲ್ಲಿ ಅಭಿಯಾನವನ್ನು ತುಂಬ ಯಶಸ್ವಿಯಾಗಿ ಮಾಡುವುದಾಗಿ ಹೇಳಿದರು. ನಂತರ ಹಲವಾರು ಸ್ವಾಮೀಜಿಗಳು ಈ ಅಭಿಯಾನದ ಕಾರ್ಯಚಟುವಟಿಕೆಗಳಿಗಾಗಿ ತಮ್ಮ ಮಠದಿಂದ ಆರ್ಥಿಕ ನೆರವನ್ನು ನೀಡುವುದಾಗಿ ತಿಳಿಸಿದರು. ಕೊನೆಗೆ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾದ ಪ್ರತಿಯೊಬ್ಬ ಸ್ವಾಮೀಜಿ ಪ್ರತಿಜ್ಞೆ ಮಾಡಬೇಕೆಂದು ಗದುಗಿನ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಇದೆ ವೇಳೆ ಬಸವ ಸಂಸ್ಕೃತಿ ಅಭಿಯಾನ ಬಸವ ಬೆಳಗು ಗೀತಗಾನ ಧ್ವನಿ ಸುರಳಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಸಮಾವೇಶದಲ್ಲಿ ನಾಡಿನ 280 ಕ್ಕಿಂತ ಹೆಚ್ಚು ಬಸವತತ್ವದ ಮಠಾಧೀಶರು ಪಾಲ್ಗೊಂಡಿದ್ದರು.