ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕ್ರೀಡಾ ಭವನದಲ್ಲಿ ಭಾನುವಾರ ಪತ್ರಕರ್ತರ ಬಳಗ, ಆಶಯ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜೆ.ಕರಿಯಪ್ಪ ಮಾಳಿಗೆ ನಡೆ-ನುಡಿ, ಗೌರವಾರ್ಪಣೆ ಮತ್ತು ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ನೆಲದ ತತ್ವಪದಕಾರರ ಅಂತರಂಗದ ಒಡನಾಟದೊಂದಿಗೆ, ಮಣ್ಣಿನ ಸತ್ವ ಮತ್ತು ಜೀವತಂತುವನ್ನು ಮೀಟಿದ ಅಪರೂಪದ ಸಂಶೋಧಕರಾಗಿದ್ದರೆಂದು ಬಣ್ಣಿಸಿದರು.
ಚಿತ್ರದುರ್ಗದ ಬಹುತ್ವವೇ ಈ ನೆಲದ ನಿಜವಾದ ಶಕ್ತಿ. ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಯಾವುದೇ ಒಂದು ನಿರ್ದಿಷ್ಟ ಜಾತಿ ಬಲಿಷ್ಠವಾಗಿಲ್ಲದಿರುವುದು ಈ ನೆಲದ ಹೆಮ್ಮೆಯ ವಿಷಯ. ಬೇಡರು, ಬೆಸ್ತರು, ಉಪ್ಪಾರರು, ಕುರುಬರು, ದಲಿತರು ಹಾಗೂ ಮುಸ್ಲಿಂರು ಸೇರಿದಂತೆ ಅನೇಕ ಸಮುದಾಯಗಳು ಸಮಾನವಾಗಿ ಬೆರೆತು ಬಾಳುತ್ತಿವೆ. ಈ ಬಹುತ್ವವೇ ಇಲ್ಲಿನ ಜನರನ್ನು ಒಟ್ಟಾಗಿ ಹಿಡಿದಿಟ್ಟಿದೆ. ನಮ್ಮ ಸಾಂಸ್ಕೃತಿಕ ಇಕ್ಕಟ್ಟುಗಳ ಮಧ್ಯೆ ಬದುಕುತ್ತಿರುವ ನಮಗೆ, ತತ್ವಪದಗಳ ಮೂಲಕ ಆಂತರಿಕ ಯಾನ ಮಾಡಿಸಿದ ಅಪರೂಪದ ವ್ಯಕ್ತಿತ್ವ ಕರಿಯಪ್ಪ ಮಾಳಿಗೆ ಅವರದ್ದೆಂದರು.ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಬರವಣಿಗೆ ಎಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ. ಅದು ಬದುಕಿನ ನಡೆಯನ್ನೇ ಪ್ರತಿಬಿಂಬಿಸುವ ಕನ್ನಡಿಯಾಗಬೇಕು. ಕರಿಯಪ್ಪ ಮಾಳಿಗೆ ಅವರ ಬದುಕು ಮತ್ತು ಬರಹ ಎರಡೂ ಒಂದೇ ಆಗಿವೆ ಎಂದರು.
ಕವಯಿತ್ರಿ ತಾರಿಣಿ ಶುಭದಾಯಿನಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಮತ್ತು ಬದುಕಿನ ಹಾದಿ ಎರಡರಲ್ಲೂ ಕರಿಯಪ್ಪ ಮಾಳಿಗೆ ಅವರು ಹಾಕಿಕೊಟ್ಟಿರುವ ಹೆಜ್ಜೆಗುರುತುಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಸಂಶೋಧನೆಯು ಕೇವಲ ಅಂಕಿ-ಅಂಶಗಳ ಸಂಗ್ರಹವಾಗದೆ, ಆ ನೆಲದ ಮಣ್ಣಿನ ಗುಣ, ಜನರ ಆಹಾರ ಪದ್ಧತಿ ಮತ್ತು ಅವರು ಕಟ್ಟಿಕೊಂಡಿರುವ ತಾತ್ವಿಕ ಸತ್ವದ ಶೋಧನೆಯಾಗಬೇಕು ಎಂದು ತಿಳಿಸಿದ ಅವರು, ಮಾಳಿಗೆ ಅವರು ಗಾದೆಗಳು ಮತ್ತು ಜನಪದ ಕಥನಗಳ ಮೂಲಕ ಸಾಂಸ್ಕೃತಿಕ ಸತ್ವವನ್ನು ಶೋಧಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕಥೆಗಾರ ಗಂಗಾಧರ್, ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ, ಎಂ.ಎನ್.ಯೋಗೇಶ್, ಗೌನಹಳ್ಳಿ ಗೋವಿಂದಪ್ಪಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ಜೆ.ಕರಿಯಪ್ಪ ಮಾಳಿಗೆ ಹಾಗೂ ಅವರ ಪತ್ನಿ ಮಹದೇವಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಹೋಬಲ ಟಿವಿಎಸ್ ಮಾಲೀಕ ಟಿ.ವಿ.ಅರುಣ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ ಅಪ್ಪು, ನಿರ್ದೇಶಕ ವೀರೇಂದ್ರ ಕುಮಾರ್ ಕೋಗುಂಡೆ ಮಠ, ರಾಜ್ಯ ಸಮಿತಿ ಸದಸ್ಯ ಎಸ್.ಸಿದ್ದರಾಜು, ಪತ್ರಕರ್ತರಾದ ಮಹೇಶ್ ಬಾಬು, ಕೆ.ಪಿ.ಓಂಕಾರಮೂರ್ತಿ, ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವಿಜಯ್ ಕುಮಾರ್, ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಇದ್ದರು.