ಕನ್ನಡಪ್ರಭ ವಾರ್ತೆ, ತುಮಕೂರುಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವಂತಹ ದುಷ್ಟಶಕ್ತಿಗಳಿಂದ ಜನರನ್ನು ಒಗ್ಗೂಡಿಸುವ ವಿಶೇಷ ಶಕ್ತಿ ರಂಗಭೂಮಿ ಕಲೆಗೆ ಇದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್, ಬೆಂಗಳೂರು ಆಶ್ರಯದಲ್ಲಿ ಕಲಾಶ್ರೀ ಹಿರಿಯ ರಂಗ ಕಲಾವಿದ ಕಲಾಶ್ರೀ ಡಾ. ಲಕ್ಷ್ಮಣದಾಸ್ ರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.ಸಮಾಜದಲ್ಲಿ ವೃತ್ತಿ ರಂಗಭೂಮಿ ಭಾವೈಕ್ಯತೆಯನ್ನು ಕಟ್ಟಿಕೊಟ್ಟಿದೆ. ಮೂಲತಃ ರಂಗಭೂಮಿ ಕಲಾವಿದರಾದ ಲಕ್ಷ್ಮಣದಾಸ್ ಅವರು ಒಂದು ರೂಪಕವಾಗಿ ಮುಖ್ಯವಾಹಿನಿಗೆ ಬರುವ ಮುಖೇನ ಸವಾಲು ಸ್ವೀಕರಿಸುವ ಅನೇಕ ಪ್ರತಿಭೆಗಳಿಗೆ ಉತ್ತೇಜಕರಾಗಿದ್ದಾರೆ. ಲಕ್ಷ್ಮಣ್‌ದಾಸ್ ಅವರದು ಮಗುವಿನ ಮನಸ್ಸು. ಮನುಷ್ಯರಲ್ಲಿ ಮಗು ಮನಸ್ಸು ಇರುವುದು ಬಹಳ ಅಪರೂಪ. ಮಗು ಎಂದಿಗೂ ಮುಗ್ದತೆಗೆ ಹೆಸರಾದದ್ದು. ಮಗು ಸದಾ ಕುತೂಹಲ, ಮುಗ್ದತೆ ಹೊಂದಿರುತ್ತದೆ. ಅಂತಹ ಮನಸ್ಸು, ಮುಗ್ದತೆ ಅವರಲ್ಲಿದೆ ಎಂದು ಅವರು ಬಣ್ಣಿಸಿದರು. ರಂಗಭೂಮಿ ಸೇವೆಯನ್ನು ರಂಗಭೂಮಿ ಕ್ರಿಯಾಶೀಲತೆ ಎಂದು ಕರೆಯಬಹುದು. ಅನೇಕ ರಂಗಭೂಮಿ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಜತೆಗೆ ಅನೇಕ ಸಿನಿಮಾ ಕಲಾವಿದರೊಂದಿಗೆ ಬೇರೆ ಬೇರೆ ನಾಟಕಗಳಲ್ಲೂ ಅಭಿನಯಿಸಿರುವ ಅನುಭವ ಹೊಂದಿದ್ದಾರೆ ಎಂದ ಅವರು, ಲಕ್ಷ್ಮಣ್‌ದಾಸ್ ಅವರು ವೃತ್ತಿ ನಾಟಕಗಳಿಗಷ್ಟೇ ಸೀಮಿತವಾಗಿರಲಿಲ್ಲ. ಕಲ್ಯಾಣಕ್ರಾಂತಿ ಎಂಬ ನಾಟಕಗಳಲ್ಲೂ ಪಾತ್ರ ಮಾಡಿದ್ದಾರೆ. ಇದರೊಂದಿಗೆ 6 ನಾಟಕಗಳನ್ನು ಕುರಿತು ಪುಸ್ತಕ ಹಾಗೂ ಗುಬ್ಬಿ ಕಂಪನಿ ಕುರಿತು ಪುಸ್ತಕವನ್ನು ಬರೆದಿದ್ದಾರೆ. ಏಕಕಾಲಕ್ಕೆ ಲೇಖಕರು, ನಟರು ಮತ್ತು ಸಂಸ್ಥೆಗಳನ್ನು ಸ್ಥಾಪನೆ ಮಾಡುವಂತಹ ಕ್ರಿಯಾಶೀಲರು, ಕಥಾಕೀರ್ತನಕಾರರು. ಎಲ್ಲಾ ಪ್ರತಿಭೆಗಳನ್ನು ಒಟ್ಟಿಗೆ ಹೊಂದಿರುವ ಕ್ರಿಯಾಶೀಲರು ಎಂದು ಬಣ್ಣಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಗ್ರಾಮೀಣ ರಂಗಭೂಮಿಯನ್ನು ಸಶಕ್ತವಾಗಿ ಕಟ್ಟಿರುವುದು ತುಮಕೂರು ಜಿಲ್ಲೆಯಲ್ಲಿ ಮಾತ್ರ. ರಂಗಭೂಮಿ ಕಲಾವಿದರು ಅಭಿನಯಿಸಲು ತಮ್ಮ ಕೈಯಿಂದಲೇ ಹಣ ಹಾಕಿಕೊಂಡು ಇಡೀ ರಾತ್ರಿ ನಾಟಕದಲ್ಲಿ ಅಭಿನಯಿಸುತ್ತಾರೆ. ಈ ಮೂಲಕ ಗ್ರಾಮೀಣ ರಂಗಭೂಮಿಯನ್ನು ಕಲಾವಿದರು ಗಟ್ಟಿಯಾಗಿ ಕಟ್ಟುತ್ತಿದ್ದಾರೆ ಎಂದರು. ಗ್ರಾಮೀಣ ರಂಗಭೂಮಿಯ ಕಲಾವಿದರನ್ನು ಇದುವರೆಗೂ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿಲ್ಲ. ಇದಕ್ಕೆ ಕಾರಣ ರಂಗಭೂಮಿ ಕಲಾವಿದರು ಸಂಘಟಿತರಾಗದಿರುವುದೇ ಕಾರಣ ಎಂದರು.
ಹಿರಿಯ ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಹಿರಿಯ ರಂಗಭೂಮಿ ಕಲಾವಿದರಾಗಿರುವ ಡಾ. ಲಕ್ಷ್ಮಣದಾಸ್ ಅವರು ವೃತ್ತಿಗಿಂತ ಪ್ರವೃತ್ತಿಯಲ್ಲಿ ಎಲ್ಲವನ್ನು ಹೆಚ್ಚು ಗಳಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯ ಕಲಾವಿದರಿಗೆ ಗೌರವ ಅಭಿನಂದನೆ ಸಲ್ಲಿಸುತ್ತಿರುವುದು ಅರ್ಥಪೂರ್ಣ ಮತ್ತು ಅವಿಸ್ಮರಣೀಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕಲಾವಿದರ ಸಂಘದ ಅಧ್ಯಕ್ಷ ಶಿವಣ್ಣ, ಧನಿಯಕುಮಾರ್, ಯೋಗಾನಂದ್, ಎಂ.ವಿ. ನಾಗಣ್ಣ, ವಸಂತಕುಮಾರ್, ಡಾ. ಡಿ.ಎನ್. ಯೋಗೀಶ್ವರಪ್ಪ, ಉಮಾಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಚಿಕ್ಕಬೆಳ್ಳಾವಿ ಶಿವಕುಮಾರ್, ಲೋಕೇಶ್‌ದಾಸ್, ಗೋಪಾಲ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.