ಇದ್ದಿಲ ಭಟ್ಟಿಗಳಲ್ಲಿ ಕರ್ರಗಾಗುವ ಕಂದಮ್ಮಗಳ ಬದುಕು

KannadaprabhaNewsNetwork |  
Published : Aug 20, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗೇಟ್ ಹತ್ತಿರ ಇರುವ ಇದ್ದಿಲು ಸುಡುವ ಭಟ್ಟಿಗಳಲ್ಲಿನ ಮಕ್ಕಳ ಬದುಕು ಕರ್ರಗಾಗುತ್ತಿದೆ. ಶಿಕ್ಷಣ ಪಡೆಯಬೇಕಾದ ವಯಸ್ಸಿನ ಮಕ್ಕಳು ತಮ್ಮ ತಂದೆ ತಾಯಂದಿರ ಕಾಯಕದ ಜೊತೆ ತಮ್ಮ ಬದುಕನ್ನು ಸುಟ್ಟುಕೊಳ್ಳುತ್ತಿದ್ದಾರೆ.

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗೇಟ್ ಬಳಿಯ ಕರಾಳ ದೃಶ್ಯ। ಮಹರಾಷ್ಟ್ರದ ಕೂಲಿ ಕಾರ್ಮಿಕರಿವರು

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗೇಟ್ ಹತ್ತಿರ ಇರುವ ಇದ್ದಿಲು ಸುಡುವ ಭಟ್ಟಿಗಳಲ್ಲಿನ ಮಕ್ಕಳ ಬದುಕು ಕರ್ರಗಾಗುತ್ತಿದೆ. ಶಿಕ್ಷಣ ಪಡೆಯಬೇಕಾದ ವಯಸ್ಸಿನ ಮಕ್ಕಳು ತಮ್ಮ ತಂದೆ ತಾಯಂದಿರ ಕಾಯಕದ ಜೊತೆ ತಮ್ಮ ಬದುಕನ್ನು ಸುಟ್ಟುಕೊಳ್ಳುತ್ತಿದ್ದಾರೆ.

ನೆರೆಯ ಮಹಾರಾಷ್ಟ್ರಕ್ಕೆ ಸೇರಿರುವ ಪೂನಾ ಹತ್ತಿರ ಇರುವ ಕಪೋಲ ಎಂಬ ಊರಿನವರಾದ ಕೂಲಿಕಾರ್ಮಿಕರು ಇದ್ದಿಲ ಭಟ್ಟಿಗಳಲ್ಲಿ ದುಡಿಯುತ್ತಿದ್ದಾರೆ. ಯಾವುದೇ ಒಬ್ಬ ಮಗುವು ಆರು ವರ್ಷ ತುಂಬಿದಾಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆದರೆ, ಇಲ್ಲಿ ಬಡ ಕೂಲಿಕಾರ್ಮಿಕರು ತಮ್ಮ ಜೀವನಕ್ಕಾಗಿ ವಲಸೆ ಬರುವಾಗ ಮಕ್ಕಳನ್ನೂ ಕರೆತಂದು ತಮ್ಮ ಕಾಯಕದ ಜೊತೆ ಇಟ್ಟುಕೊಂಡಿದ್ದಾರೆ. ಇವರ ಜೋಪಡಿಗಳು ಮನುಷ್ಯರು ಬದುಕುವ ಸ್ಥಳಗಳಾಗಿ ಉಳಿದಿಲ್ಲ.

ಬಿರುಸಾದ ಮಳೆ, ಗಾಳಿ ಬಂದರೆ ಸಮೀಪದ ಗೋಡಾನ್‌ಗೆ ಹೋಗಬೇಕು. ಕೂಲಿ ಕಾರ್ಮಿಕರ ವಯಸ್ಸಾದ ಪೋಷಕರು ಗೋಡಾನ್‌ಗೆ ಹೋಗಲೂ ಆಗದಷ್ಟು ತ್ರಾಣ ಕಳೆದುಕೊಂಡಿದ್ದಾರೆ. ಮಳೆ ಇಲ್ಲದೇ ನಲುಗುತ್ತಿರುವ ಚಳ್ಳಕೆರೆಯಂತಹ ಬರಡು ಭೂಮಿಯಲ್ಲಿ ಉರಿವ ಬಿಸಿಲಲ್ಲಿ ಇದ್ದಿಲ ಭಟ್ಟಿಗಳ ಹೊಗೆಯಲ್ಲಿ ಜಗತ್ತಿನ ಪರಿವೇ ಇಲ್ಲದ ಕಂದಮ್ಮಗಳ ಬದುಕು ಕುಲುಮೆಗಳಲ್ಲೇ ಕರಗಿಹೋಗುತ್ತಿದೆಯಾ? ಎಂಬ ಆತಂಕ ಮೂಡುತ್ತಿದೆ.

ಶಿಕ್ಷಣ ಪಡೆಯಲು ಎಲ್ಲಾ ಮಕ್ಕಳಿಗೂ ಸಂವಿಧಾನದಲ್ಲಿ ಅವಕಾಶ ಇದೆ. ಇದಕ್ಕೆ ಭಾಷೆ, ಮತ, ಗಡಿಗಳ ಮಿತಿಯಿಲ್ಲ. ಸುಮಾರು ಆರು ವರ್ಷದ ಹತ್ತು ಮೂರರಿಂದ ನಾಲ್ಕು ವರ್ಷದ ಹತ್ತು ಮಕ್ಕಳು ಇಲ್ಲಿದ್ದಾರೆ. ಶಾಲಾ ಅಂಗಳದಲ್ಲಿ ಆಟ ಆಡುತ್ತಾ ನಲಿದಾಡುವ ವಯಸ್ಸಿನಲ್ಲಿ ಬಿರು ಬಿಸಿಲಲ್ಲಿ ಇದ್ದಿಲ ಭಟ್ಟಿಗಳ ಅಂಗಳದಲ್ಲಿ ತಮ್ಮ ಬದುಕುಗಳನ್ನೇ ಪಣಕ್ಕಿಟ್ಟವರಂತೆ ಆಟ ಆಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ.

ಜೀವನ ನಿರ್ವಹಣೆಗಾಗಿ ದೂರದೂರಿನಿಂದ ಇಲ್ಲಿಗೆ ಬಂದು ಕೂಲಿ ಕಾರ್ಮಿಕರಾಗಿ ಪೋಷಕರು ಕೆಲಸ ಮಾಡುತ್ತಿದ್ದಾರೆ. ಭಟ್ಟಿಗಳಿಗೆ ಮರದ ದಿಮ್ಮಿಗಳನ್ನು ಹಾಕಿ ಸುಟ್ಟು ಇದ್ದಿಲು ಮಾಡುವ ಪ್ರಕ್ರಿಯೆಯಲ್ಲಿ ಇವರಿಗೆ ಒಂದು ಚೀಲಕ್ಕೆ ಇಂತಿಷ್ಟು ಅಂತ ನೀಡುತ್ತಾರೆ. ಹೆಂಗಸರು, ಗಂಡಸರು ಸೇರಿ ಭಟ್ಟಿಗಳಲ್ಲಿ ಸುಟ್ಟ ಇದ್ದಿಲುಗಳನ್ನು ಚೀಲಕ್ಕೆ ತುಂಬುವ ಒಂದು ವರ್ಗ ಒಂದೆಡೆಯಾದರೆ, ತುಂಬಿದ ಚೀಲಗಳನ್ನು ಲೋಡ್ ಮಾಡುವ ಕೂಲಿ ವರ್ಗ ಇನ್ನೊಂದೆಡೆ. ಲೋಡ್ ಮಾಡುವವರೆಲ್ಲಾ ಬಿಹಾರಿಗಳು. ಹೆಂಗಸರು, ಗಂಡಸರು ಎಂಬ ಯಾವುದೇ ತಾರತಮ್ಯವಿಲ್ಲದೇ ಸಮನಾಗಿ ದುಡಿಯುತ್ತಿದ್ದಾರೆ. ಇಂತಹವರ ಮಕ್ಕಳೂ ಇಲ್ಲಿವೆ. ಇವರಿಗೆಲ್ಲಾ ಶಿಕ್ಷಣ ಕೊಡುವವರು ಯಾರು ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

-----

ಕೋಟ್:

ಮಹಾರಾಷ್ಟ್ರ, ಬಿಹಾರದಿಂದ ಕೂಲಿಕಾರ್ಮಿಕರಾಗಿ ಬಂದಿರುವ ಕೂಲಿಕಾರರ ಮಕ್ಕಳು ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ ವಲಸೆ ಬಂದಿರುವ ಪೋಷಕರ ಜೊತೆ ಇಲ್ಲಿದ್ದಾರೆ. ಇಂತಹ ಮಕ್ಕಳ ಶಿಕ್ಷಣಕ್ಕೆ ಗುಡಾರ ಶಾಲೆಗಳನ್ನು ಆರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿವರೆಗೂ ಸಮೀಪದ ಕಮ್ಮತ್ ಮರಿಕುಂಟೆ ಸರ್ಕಾರಿ ಶಾಲೆಗೆ ಹೋಗಲು ಹೇಳಿದ್ದೇವೆ. ಆದರೆ, ಭಾಷಾ ಸಮಸ್ಯೆ. ಕನಿಷ್ಠ ಕಲಿಕಾ ವಾತಾವರಣದಲ್ಲಿ ಮಕ್ಕಳು ಇರಬೇಕೆಂಬುದು ನಮ್ಮ ಉದ್ದೇಶ. ಆದರೂ ಮಕ್ಕಳು ಹೋಗುತ್ತಿಲ್ಲ.

-----ಕೆ.ಎಸ್. ಸುರೇಶ್, ಶಿಕ್ಷಣಾಧಿಕಾರಿ

--------------

ಪೋಟೋ ಕ್ಯಾಪ್ಸನ್

ಕಟ್ಟಿಗೆ ಸುಟ್ಟು ಇದ್ದಿಲು ಮಾಡುತ್ತಿರುವ ಕೂಲಿ ಕಾರ್ಮಿಕರು.

-------ಫೋಟೋ ಪೈಲ ನೇಮ್-19 ಸಿಟಿಡಿ4

----------

ಇದ್ದಿಲು ಭಟ್ಟಿಗಳ ನಡುವೆ ತಮ್ಮ ಶಿಕ್ಷಣ ಮಸುಕಾಗಿಸಿಕೊಂಡಿರುವ ಮಕ್ಕಳು.

-------ಫೋಟೋ ಪೈಲ್ ನೇಮ್-19 ಸಿಟಿಡಿ5

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಭಂಜಕರಿಗೆ ಕಾದಿದೆ ಭಾರಿ ದಂಡ!
ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳಿಗೆ ವರದಾನ: ನಂಜಾವಧೂತ ಶ್ರೀ